ಕರ್ನಾಟಕ

ಅಮೆರಿಕದ ದಾಖಲೆಯನ್ನೇ ಹಿಂದಿಕ್ಕಿದ ಕೋಲಾರದ ಕುವರ

Pinterest LinkedIn Tumblr

ಕೋಲಾರ: ಜಿಲ್ಲೆಯ ಮಲ್ಲಿಕಾರ್ಜುನ ರೆಡ್ಡಿ ಎಂಬ ವ್ಯಕ್ತಿ ವಿಶ್ವದ ದಿಗ್ಗಜ ರಾಷ್ಟ್ರ ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ, ಸೂಕ್ಷ್ಮ ಕಲಾಕೃತಿಗಳ ರಚನೆಯಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ತೊಪ್ಪನಹಳ್ಳಿಯ ಮಲ್ಲಿಕಾರ್ಜುನ್ ರೆಡ್ಡಿ, ಸೀಮೆ ಸುಣ್ಣದಲ್ಲೇ ಅದ್ಭುತವಾದ ಸಾವಿರಾರು ವಿವಿಧ ಕಲಾಕೃತಿಗಳನ್ನು ಬಿಡಿಸಿ ಸೂಕ್ಷ್ಮ ಕಲಾವಿದನ ಸಾಲಿನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದಂತೆ ಇನ್ನೂ ಹಲವಾರು ಸಾಧನೆ ಮಾಡಿದ್ದಾರೆ.

 

ಟೂತ್‍ಪಿಕ್‍ನಲ್ಲಿ 17 ಚೈನ್ ಲಿಂಕ್ ಮಾಡಿ ದಾಖಲೆ ಮಾಡಿದ್ದ ಅಮೆರಿಕದ ದಾಖಲೆಯನ್ನು ಮುರಿದು, ಟೂತ್‍ಪಿಕ್‍ನಲ್ಲಿ 28 ಲಿಂಕ್ ಮಾಡುವ ಮೂಲಕ 2005ರ ಫೆಬ್ರವರಿ 21 ರಂದು ಮಲ್ಲಿಕಾರ್ಜುನ ರೆಡ್ಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲೆ ಪುಟ ಸೇರಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಜನಿಸಿದ್ದರು ಬಿ.ಎಸ್.ಸಿ ಬಯೋ ಟೆಕ್ನಾಲಜಿ ವಿದ್ಯಾರ್ಹತೆ ಹೊಂದಿರುವ ಮಲ್ಲಿಕಾರ್ಜುನ್ ಸದ್ಯ ಹಿರಿಯ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಸೂಕ್ಷ್ಮ ಕಲೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರು ಬಾಲ್ಯದಿಂದಲೇ ಸಾವಿರಾರು ವಿವಿಧ ಸೂಕ್ಷ್ಮ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

 

ಸೀಮೆ ಸುಣ್ಣದಲ್ಲಿ 62 ಸಾವಿರ ವಿವಿಧ ಗಣ್ಯರ, ಸ್ಥಳಗಳು, ದೇವರ ವಿಗ್ರಹಗಳನ್ನು ಕೆತ್ತನೆ ಮಾಡಿರುವ ಇವರು, ಒಂದೇ ಒಂದು ಅಕ್ಕಿ ಕಾಳಿನಲ್ಲಿ 18 ವಿವಿಧ ವಿಗ್ರಹಗಳನ್ನು ಮಾಡಿರುವುದು ಮತ್ತೊಂದು ವಿಶೇಷ ಸಾಧನೆಯಾಗಿದೆ. ಚಿಕ್ಕಂದಿನಿಂದ ವಿದ್ಯಾಭ್ಯಾಸಕ್ಕಿಂತ ಸೂಕ್ಷ್ಮ ಕಲೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಲ್ಲಿಕಾರ್ಜುನ್ ಲಾಸ್ಟ್ ಬೆಂಚ್ ವಿದ್ಯಾರ್ಥಿ. ಕೊನೆ ಬೆಂಚ್‍ನಲ್ಲಿ ಕುಳಿತುಕೊಂಡು ತನ್ನ ಕೈಗೆ ಸುಲಭವಾಗಿ ಸಿಗುತ್ತಿದ್ದ ಅಕ್ಕಿ ಕಾಳು, ಸೀಮೆ ಸುಣ್ಣ, ಟೂತ್ ಪಿಕ್‍ನಲ್ಲಿ ವಿವಿಧ ಕಲಾಕೃತಿಗಳನ್ನು ಬಿಡಿಸುತ್ತಾ ಸಾಧನೆ ಮಾಡಿದ ಅಪ್ಪಟ ಹಳ್ಳಿ ಪ್ರತಿಭೆ.

 

ಅದಾದ ನಂತರ ಸ್ನೇಹಿತರ ಸಮ್ಮುಖದಲ್ಲಿ ವಿಶ್ವ ದಾಖಲೆಯ ಹಂತ ತಲುಪಿರುವ ಇವರು, ಸದ್ಯ ಹರಪ್ಪ-ಮಹೆಂಜೋದಾರೋ ಸಂಸ್ಕೃತಿ ಕುರಿತು ಹೆಚ್ಚಿನ ಸಂಶೋಧನ ಅಧ್ಯಯನ ಮಾಡುತ್ತಿದ್ದಾರೆ. ಇವರ ಸಾಧನೆ ಪರಿಗಣಿಸಿ ವಿವಿಧ ವಿಶ್ವವಿದ್ಯಾಲಯಗಳು ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಿದರೆ, ದೇಶದ ವಿವಿಧ ಗಣ್ಯರಿಂದ ಪ್ರಶಂಸೆಗಳು ದೊರೆತಿವೆ. ಸದ್ಯ ತೊಪ್ಪನಹಳ್ಳಿಯಲ್ಲಿ ತಂದೆ ತಾಯಿಯ ಜೊತೆಗೆ ಸಮಾಜ ಸೇವೆ ಮಾಡುತ್ತಾ ಸಂಶೋಧನೆಗಳಲ್ಲಿ ತೊಡಗಿದ್ದಾರೆ.

 

ಒಟ್ಟಿನಲ್ಲಿ ಸೂಕ್ಷ್ಮ ಕಲೆಯಿಂದಲೇ ದೊಡ್ಡ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿರುವ ಮಲ್ಲಿಕಾರ್ಜುನ ರೆಡ್ಡಿ ಗಿನ್ನಿಸ್ ದಾಖಲೆ ಬರೆದ ವ್ಯಕ್ತಿಯಾಗಿದ್ದಾರೆ. ಹೀಗೆ ಮತ್ತಷ್ಟು ಮೊಗದಷ್ಟು ಸಾಧನೆ ಮಾಡಬೇಕೆನ್ನುವ ದಾಹದಿಂದ ದೊಡ್ಡ ಸಂಶೋಧನೆಗಳನ್ನು ಮಾಡಲು ಮುಂದಾಗಿರುವ ಇವರಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ.

Comments are closed.