ಕರ್ನಾಟಕ

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಗೆ ಎಸ್ ಐಟಿ ಮನವಿ

Pinterest LinkedIn Tumblr

ಬೆಂಗಳೂರು: 40 ಸಾವಿರ ಹೂಡಿಕೆದಾರರಿಗೆ ಸಾವಿರಾರು ಕೋಟಿ ರುಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ವಿಶೇಷ ತನಿಖಾ ತಂಡ(ಎಸ್ಐಟಿ ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.

ಸಾವಿರಾರು ಜನರಿಗೆ ಪಂಗನಾಮ ಹಾಕಿ ಜೂನ್ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳಿರುವ ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ನಾವು ಕೇಂದ್ರ ಗೃಹ ಸಚಿವಾಲಯಕ್ಕೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ಎಸ್ಐಟಿ ಮುಖ್ಯಸ್ಥ ಡಿಐಜಿ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ಸಾವಿರಾರು ಕೋಟಿ ರುಪಾಯಿ ವಂಚಿಸಿರುವ ಮನ್ಸೂರ್ ಖಾನ್ ತನ್ನಿಬ್ಬರು ಪತ್ನಿಯರೊಂದಿಗೆ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ಆತನಿಗಾಗಿ ಬಲೆ ಬೀಸಿರುವ ಎಸ್ಐಟಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.

ಸಾವಿರಾರು ಹೂಡಿಕೆದಾರರಿಗೆ ಹಣ ಹಿಂದುರಿಗಿಸದೆ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದು, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದ್ದು, ನಿನ್ನೆ ಖಾನ್‌ನ ಮೂರನೇ ಪತ್ನಿಯ ಮನೆ ಮೇಲೆ ದಾಳಿ ನಡೆಸಿ, ಚಿನ್ನಾಭರಣ ವಶಪಡಿಸಿಕೊಂಡಿತ್ತು. 40,600 ಮಂದಿ ಐಎಂಎಯಲ್ಲಿ ಹೂಡಿಕೆ ಮಾಡಿರುವುದಾಗಿ ದೂರು ನೀಡಿದ್ದಾರೆ.

Comments are closed.