ಬೆಂಗಳೂರು (ಜೂನ್.15); ರಾಜ್ಯ ಕಾಂಗ್ರೆಸ್ ಒಳಗಿನ ದಿಢೀರ್ ಬೆಳವಣಿಗೆಯಲ್ಲಿ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಸೋಲಿಗೆ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗಾಂಧಿ ನಗರ ಶಾಸಕ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ದಿನೇಶ್ ಗುಂಡೂರಾವ್ 2018 ಜುಲೈ. 4ರಂದು ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲ್ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ.
ಪಕ್ಷದ ಒಳಬೇಗುದಿಗೆ ಬೇಸತ್ತು ರಾಜೀನಾಮೆ ನೀಡಿರುವ ಗುಂಡೂರಾವ್
ಮಾಜಿ ಸಚಿವ ದಿನೇಶ್ ಗುಂಡುರಾವ್ ಅವರನ್ನು ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಜಿ. ಪರಮೇಶ್ವರ್ ಅವರಿಂದ ತೆರವಾದ ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 2018 ಜುಲೈ 4 ರಂದು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.
ಆದರೆ, ಕಳೆದ ಒಂದು ವರ್ಷದಿಂದ ಅವರ ಅಧಿಕಾರ ಹಾಗೂ ಕಾರ್ಯವೈಖರಿ ಬಗ್ಗೆ ಪಕ್ಷದ ಹಿರಿಯ ನಾಯಕರಿಂದ ಅಪಸ್ವರ ಕೇಳಿ ಬರುತ್ತಲೇ ಇತ್ತು. ಈ ಹಿಂದೆ ಮಾಜಿ ಸಚಿವ ರೋಷನ್ ಬೇಗ್ ಅಸಮರ್ಥ ಅಧ್ಯಕ್ಷ ಎಂದು ಬಹಿರಂಗವಾಗಿಯೇ ಅವರನ್ನು ಜರಿದಿದ್ದರು. ಇನ್ನೂ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಹ ದಿನೇಶ್ ಗುಂಡೂರಾವ್ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಗೊಂಬೆ ಎಂದು ದೂರಿದ್ದರು.
ಇದಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಹೀನಾಯ ಸೋಲಿಗೂ ಅವರನ್ನೇ ಹೊಣೆ ಮಾಡಲಾಗಿತ್ತು. ಇದರಿಂದ ಸಾಮಾನ್ಯವಾಗಿ ಬೇಸರಗೊಂಡಿದ್ದ ದಿನೇಶ್ ಗುಂಡೂರಾವ್ ಕಳೆದ ಎರಡು ದಿನಗಳಿಂದ ಕೆಪಿಸಿಸಿ ಕಚೇರಿಗೂ ಆಗಮಿಸಿರಲಿಲ್ಲ. ಅಲ್ಲದೆ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಕೊನೆಗೂ ಪಕ್ಷದಲ್ಲಿನ ಹಿರಿಯರ ಅಸಹಾರ ಹಾಗೂ ಒಳಬೇಗುದಿಗೆ ಬೇಸತ್ತು ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Comments are closed.