ಕರ್ನಾಟಕ

2020ರ ಮೊದಲ 3 ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ- ಕೋಳಿವಾಡ ಭವಿಷ್ಯ

Pinterest LinkedIn Tumblr


ಬೆಂಗಳೂರು: ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಈ ಮೈತ್ರಿ ಸರಿಯಲ್ಲ ಎಂದಿದ್ದಾರೆ.

ನಾಳೆ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ಇಬ್ಬರು ಸ್ವತಂತ್ರ ಪಕ್ಷದ ಅಭ್ಯರ್ಥಿಗೆ ಅವಕಾಶವಿದೆ. ಸಚಿವ ಸ್ಥಾನದ ಅವಕಾಶ ನೀಡುವ ಚರ್ಚೆ ನಡೆದಿದೆ. ಮೊದಲಿಗೆ ವಿಸ್ತರಣೆಗೆ ಕೈ ಹಾಕಲಾಗಿದೆ. ನಂತರ ಪುನಃರಚನೆ ಮಾಡುವ ಚಿಂತನೆಯಿದೆ. ಜೆಡಿಎಸ್ ಜೊತೆ ಮೈತ್ರಿ ಸರಿಯಲ್ಲ. ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿರಬೇಕಿತ್ತು. ಆಗ ನಮ್ಮ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು ಎಂದಿದ್ದಾರೆ.

ಅಲ್ಲದೇ, ಜೆಡಿಎಸ್ ಜೊತೆ ಮೈತ್ರಿ ನಮಗೆ ಹೊಂದಿಕೆಯಾಗಲ್ಲ. ವಿರೋಧ ಪಕ್ಷದಲ್ಲಿ ಕುಳಿತರೂ ಉತ್ತಮವೇ. ಹಿಂದೆ ನಾನು ಧರ್ಮಸಿಂಗ್ ಅವಧಿಯಲ್ಲಿ ಹೇಳಿದ್ದೆ. ಈಗಲೂ ನಾನು ಇದನ್ನೇ ಹೇಳುತ್ತೇನೆ. ಮೈತ್ರಿಯಿಂದಾಗಿಯೇ ನಾವು ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯ್ತು ಎಂದು ಕೋಳಿವಾಡ ಆರೋಪ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಕಲ್ಪನೆಯೇ ಬೇಡ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಸಾಕಷ್ಟು ಹಿನ್ನಡೆಯಾಗಿದೆ. ಹೈಕಮಾಂಡ್ ಸೂಚನೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಈಗಲೂ ಸರ್ಕಾರ ಉಳಿಸಿಕೊಳ್ಳುವ ಭಯವಿದೆ. ಹೀಗಾಗಿಯೇ ಮೈತ್ರಿ ಮುಂದುವರಿಸಿದ್ದಾರೆ. ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೋಳಿವಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು. 2020ರ ಮೊದಲ ಮೂರು ತಿಂಗಳಲ್ಲಿ ಉರುಳಲಿದೆ. ಖಡಾಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಕೋಳಿವಾಡ ಭವಿಷ್ಯ ನುಡಿದಿದ್ದಾರೆ.

Comments are closed.