ಕರ್ನಾಟಕ

ರಾಜಧಾನಿ ಸುತ್ತಮುತ್ತ ಹಾಗೂ ಮೈಸೂರು, ದಾವಣಗೆರೆಯಲ್ಲಿ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ಬರದಿಂದ ಕಂಗೆಟ್ಟಿರುವ ರಾಜ್ಯದ ಕೆಲವೆಡೆ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ನೂರಕ್ಕೂ ಹೆಚ್ಚು ಮರಗಳನ್ನು ಉರುಳಿಸಿದ್ದ ಮಳೆರಾಯ ಇವತ್ತು ಬೆಂಗಳೂರಿನ ಸುತ್ತಲ ಪ್ರದೇಶಗಳಲ್ಲಿ ಮೊರೆದಿದೆ. ದಾವಣಗೆರೆ, ಮೈಸೂರು ಮೊದಲಾದ ಕಡೆಯೂ ಮಳೆ ಸುರಿದಿದೆ. ಮಳೆರಾಯನ ಆಗಮನದಿಂದ ಹಲವು ಕಡೆ ಜನಜೀವನ ತತ್ತರಿಸಿದರೂ, ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

ನೆಲಮಂಗಲದ ತಿಮ್ಮಸಂದ್ರ, ಚಿಕ್ಕಮಾರನಹಳ್ಳಿ, ಬೇಗೂರು ತ್ಯಾಮಗೊಂಡ್ಲು, ಗೋವೇನಹಳ್ಳಿ ಮೊದಲಾದ ಕಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿ. ತ್ಯಾಮಗೊಂಡ್ಲು ಬಳಿ ಮರಗಳು ರಸ್ತೆಗೆ ಉರುಳಿಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಗೋವೇನಹಳ್ಳಿ ಗಾಳಿಯ ರಭಸಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿಯೇ ಕಿತ್ತುಹೋಗಿ ದೂರ ಹಾರಿಬಿದ್ದಿದೆ.

ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕುಗಳಲ್ಲಿ ಭರ್ಜರಿ ಮಳೆಯಾಗಿದೆ. ಕೋಲಾರ ತಾಲೂಕಿನ ರಾಮಪುರ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ರಸ್ತೆಗೆ ಉರುಳಿಬಿದ್ದಿವೆ. ವಿದ್ಯುತ್ ಕಂಬವೊಂದು ರಾಮಪುರದ ಕುಡಿಯುವ ನೀರಿನ ಘಟಕದ ಮೇಲೆ ಬಿದ್ದು ಹಾನಿಗೊಂಡಿದೆ. ಇನ್ನು, ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ, ನೀಲಟೂರು ಹೊಸಹಳ್ಳಿ, ತಿನ್ನಲಿ ಗ್ರಾಮಗಳಲ್ಲಿ ವರುಣನ ಸಿಂಚನವಾಗಿದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ ಕಾಲುವೆಗಳು ತುಂಬಿಹರಿಯುತ್ತಿರುವುದರಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ರಾಜ ಕಾಲುವೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿರುವ ದೃಶ್ಯಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

Comments are closed.