
ಹುಬ್ಬಳ್ಳಿ: ಹೆಚ್.ಡಿ. ಕುಮಾರಸ್ವಾಮಿಯವರಿಗೆ ಅಪಾರ ಜನಮನ್ನಣೆ ತಂದು ಕೊಟ್ಟ ಕಾರ್ಯಕ್ರಮ ಗ್ರಾಮ ವಾಸ್ತವ್ಯ. ಎಚ್ಡಿಕೆ ಈ ಹಿಂದೆ ಸಿಎಮ್ ಆಗಿದ್ದಾಗ ಕುಗ್ರಾಮಗಳಿಗೂ ಸಂಪೂರ್ಣ ಆಡಳಿತ ತೆಗೆದುಕೊಂಡು ಹೋಗಿ ಜನಮೆಚ್ಚುಗೆ ಗಳಿಸಿದ್ದರು. 2006ರ ಅಕ್ಟೋಬರ್ 10ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ರು. ಅಲ್ಲಾಬಿ ನದಾಫ್ ಅವರ ಮನೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಗ್ರಾಮೀಣ ಜೀವನದ ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಸುವರ್ಣ ಗ್ರಾಮ ಯೋಜನೆಯನ್ನು ಜಾರಿಗೆ ತಂದಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಬಳಿಕ ನಾವಳ್ಳಿ ಗ್ರಾಮ ಅಭಿವೃದ್ಧಿಯತ್ತ ಮುಖ ಮಾಡಿತ್ತು.
ಮೂರು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಸರ್ಕಾರಿ ಪ್ರೌಢಶಾಲೆ ಇದ್ದರೆ ಹೊಸ ಶಾಲೆ ತೆಗೆಯಬಾರದು ಎಂಬ ಕಾನೂನು ಇದ್ದರೂ ಕೂಡ ನಾವಳ್ಳಿ ಗ್ರಾಮವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಗ್ರಾಮದಲ್ಲಿ ನೂತನ ಪ್ರೌಢಶಾಲೆ ಮಂಜೂರು ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದರು. ಅದರ ಪರಿಣಾಮವಾಗಿ ಗ್ರಾಮದಲ್ಲಿ ಸ್ವಂತ ಕಟ್ಟಡದೊಂದಿಗೆ ಪ್ರೌಢಶಾಲೆ ಆರಂಭಗೊಂಡಿದೆ.
ನಾವಳ್ಳಿ ಗ್ರಾಮಕ್ಕೆ ಬಸ್ ಸಂಪರ್ಕವಿರಲಿಲ್ಲ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ನಂತರ ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ನಾವಳ್ಳಿಗೆ ಬಸ್ ಸಂಚಾರ ಆರಂಭಿಸಲಾಯಿತು. ಅದಕ್ಕೆ ಇಂದಿಗೂ ಕೂಡ ಕುಮಾರಸ್ವಾಮಿ ಬಸ್ ಎಂದೇ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಹೆಮ್ಮೆಯಿಂದ ಕರೆಯುತ್ತಾರೆ.
ನಾವಳ್ಳಿಯ ಮಹಿಳೆಯರು ಕುಮಾರಸ್ವಾಮಿಯವರನ್ನು ಭೇಟಿಯಾಗಿ ಕುಡಿತದ ಹಾವಳಿಯಿಂದಾಗಿ ತಮ್ಮ ಸಂಸಾರಗಳು ಬೀದಿಪಾಲಾಗುತ್ತಿವೆ ಎಂದು ಕಣ್ಣೀರು ಹಾಕಿದ್ದರು. ಹೀಗಾಗಿ ಗ್ರಾಮದಲ್ಲಿನ ಸಾರಾಯಿ ಅಂಗಡಿಗಳನ್ನೂ ಮುಚ್ಚಲಾಗಿತ್ತು.
ರೈತರು ಉಳ್ಳಾಗಡ್ಡಿ ಬೆಲೆ ಕುಸಿತ ಕುರಿತು ಕುಮಾರಸ್ವಾಮಿ ಅವರ ಗಮನ ಸೆಳೆದಿದ್ದರು. ಅಂದು ಮಾರುಕಟ್ಟೆಯಲ್ಲಿ ಉಳ್ಳಾಗಡಿ ಬೆಲೆ ಕ್ವಿಂಟಾಲ್ಗೆ 50ರಿಂದ 80ರೂಪಾಯಿ ಮಾತ್ರವಿತ್ತು. ತಕ್ಷಣವೇ ಉಳ್ಳಾಗಡ್ಡಿಗೆ ಬೆಂಬಲ ಬೆಲೆ ಘೋಷಿಸಿದ್ದ ಎಚ್ಡಿಕೆ ಪ್ರತಿ ಕ್ವಿಂಟಾಲ್ಗೆ 500 ರೂಪಾಯಿ ನಿಗದಿಪಡಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ತಮಗೆ ಸರಿಯಾಗಿ ವೇತನ ದೊರಕುತ್ತಿಲ್ಲ ಎಂದು ಸಿಎಮ್ ಬಳಿ ಅಳಲು ತೋಡಿಕೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರನ್ನು ಮಾರನೆಯ ದಿನದಿಂದಲೇ ಜಿಲ್ಲಾ ಪಂಚಾಯತ್ನ ನೌಕರರನ್ನಾಗಿ ಪರಿಗಣಿಸಲು ಸಿಎಮ್ ಆದೇಶಿಸಿದ್ದರು.
ನಾವಳ್ಳಿ- ಇಬ್ರಾಹಿಂಪೂರ ರಸ್ತೆ ಡಾಂಬರೀಕರಣ. ನಾವಳ್ಳಿ- ಗುಡಿಸಾಗರ ಮಧ್ಯೆ ರಸ್ತೆ ಸಂಪರ್ಕ. ಕೊನ್ನೂರು- ನಾವಳ್ಳಿ- ಕೊಂಡಿಕೊಪ್ಪ ಕ್ರಾಸ್ ರಸ್ತೆ ನಿರ್ಮಾಣ. ನಾವಳ್ಳಿ ಗ್ರಾಮದ ಸುತ್ತಲೂ ಕಾಂಕ್ರಿಟ್ ರಸ್ತೆಗಳ ನಿರ್ಮಾಣ. ನಾವಳ್ಳಿ ಗ್ರಾಮದ ಕಲ್ಮೆಶ್ವರ ದೇವಸ್ಥಾನದ ಸಮುದಾಯ ಭವನ, ರಂಗಮಂದಿರ, ಶಾಲೆಯ ಹಿಂಭಾಗದಲ್ಲಿರುವ ಸಮುದಾಯ ಭವನ, ಶರಣಬಸಪ್ಪ ದೇವಸ್ಥಾನ ಜೀರ್ಣೋದ್ಧಾರ, ಅಂಜುಮನ್ ಇಸ್ಲಾಂ ಕಮೀಟಿಯ ಸಮುದಾಯ ಭವನ, ರುದ್ರಾನಂದ ಮಠದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಹರಿದು ಬಂದಿದೆ. ಬಸ್ ನಿಲ್ದಾಣ ಮತ್ತು ಚಂದಣ್ಣನವರ ಪ್ಲಾಟ್ ಬಳಿ ಕಾಂಕ್ರಿಟ್ ರಸ್ತೆ. ಗಟಾರು ನಿರ್ಮಾಣ. ಗ್ರಾಮ ಪಂಚಾಯತ್ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗಿದೆ.
ಹೀಗೆ ಗ್ರಾಮಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಹರಿದುಬಂದಿದೆ. ಎಚ್ಡಿಕೆ ಗ್ರಾಮೀಣಾಭಿವೃದ್ಧಿಯ ಫಲವಾಗಿ ತಾವು 2013ರ ಚುನಾವಣೆಯಲ್ಲಿ ಗೆದ್ದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಲು ಸಾಧ್ಯವಾಯಿತು ಎನ್ನುವುದು ಎನ್.ಎಚ್. ಕೋನರೆಡ್ಡಿ ನಂಬಿಕೆ. ಈಗ ಸಿಎಮ್ ರಾಜಕೀಯ ಕಾರ್ಯದರ್ಶಿಯಾಗಿರುವ ಎನ್.ಎಚ್. ಕೋನರೆಡ್ಡಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಎಚ್ಡಿಕೆ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾಗಿ ಹೇಳುತ್ತಾರೆ. ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ತುಪ್ಪದ ಕುರಹಟ್ಟಿ- ನಾವಳ್ಳಿ ನಡುವೆಯಿರುವ ಹಂದಿಗನಾಳ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಮೂಲಕ ಈಗಾಗಲೇ 12 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕಾಮಗಾರಿಗೆ ಅನುಮೋದನೆ ನೀಡಲು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿ ಕುಮಾರಸ್ವಾಮಿಯವರೇ ಶಿಲಾನ್ಯಾಸ ನೆರವೇರಿಸುತ್ತಾರೆ ಎನ್ನುವುದು ಗ್ರಾಮಸ್ಥರು ನಿರೀಕ್ಷೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಪರಿಕಲ್ಪನೆಯನ್ನು ಇಡೀ ವಿಶ್ವವೇ ಮುಕ್ತ ಕಂಠದಿಂದ ಶ್ಲಾಘಿಸಿತ್ತು. ಆದರೆ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಪತನವಾದ ನಂತರ ನಾವಳ್ಳಿ ಗ್ರಾಮದ ಅಭಿವೃದ್ಧಿ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಹಂದಿಗ್ಯಾನಹಳ್ಳದ ಸೇತುವೆ ನಿರ್ಮಾಣ ಮಾಡಬೇಕು. ಗ್ರಾಮದ ಅಡ್ನೂರು ಮತ್ತು ಕಿತ್ತೂರು ಕ್ವಾರೆಗೆ ನೀರು ತುಂಬಿಸುವ ಕಾರ್ಯ ತುರ್ತಾಗಿ ಆಗಬೇಕು. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ. ಈಗ ಕುಮಾರಸ್ವಾಮಿ ಅವರು ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವ ಹಿನ್ನೆಲೆಯಲ್ಲಿ ನಾವಳ್ಳಿ ಗ್ರಾಮ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಕಾರಣದಿಂದಲಾದರೂ ನೆನೆಗುದಿಯಲ್ಲಿ ಬಿದ್ದಿರುವ ಅದರ ಕೆಲ ಅಭಿವೃದ್ಧಿ ಯೋಜನೆಗಳು ಕಾರ್ಯಗತಕ್ಕೆ ಬರುವ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.
Comments are closed.