ಬೆಂಗಳೂರಲ್ಲಿ ಮಳೆರಾಯ ಮೇಲಿಂದ ಮೇಲೆ ಅಬ್ಬರಿಸ್ತಿದ್ದಾನೆ. ಕಳೆದ ಮೂರ್ನಾಲ್ಕು ದಿನದಿಂದ ಕೊಂಚ ರಿಲ್ಯಾಕಲ್ಸ್ ಕೊಟ್ಟಿದ್ದ ವರುಣ ಮತ್ತೆ ಇವತ್ತು ಆರ್ಭಟಿಸಿದ್ದಾನೆ. ಸಂಜೆ ಏಳು ಗಂಟೆಗೆ ಶುರುವಾದ ಮಳೆ ನಗರದ ಬಹುತೇಕ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದೆ. ಒಂದ್ಕಡೆ ಸಿಡಿಲು ಆರ್ಭಟಿಸ್ತಿದ್ದಾರೆ, ಬಿರುಗಾಳಿ ಸಹ ಜೋರಾಗಿ ಬೀಸ್ತಿತ್ತು. ಇದರ ಪರಿಣಾಮ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.
ಕೊಡಿಗೇಹಳ್ಳಿ, ಸಹಕಾರ ನಗರ, ವಿದ್ಯಾರಣ್ಯಪುರ, ಸುಲ್ತಾನ್ ಪಾಳ್ಯ, ಲುಂಬಿನಿಗಾರ್ಡನ್, HSR ಲೇಔಟ್‌ನಲ್ಲಿ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಮರಗಳು ಬುಡಮೇಲಾಗಿವೆ. ಬೆನ್ಸನ್ ಟೌನ್ ಬಳಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ರಿಂದ ಮಳೆಯ ನಡುವೆಯೂ ಮರ ಹೊತ್ತಿ ಉರಿದಿದೆ. ಇನ್ನು ಅತ್ತ ನೆಲಮಂಗಲದಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದೊಡ್ಡಬಳ್ಳಾಪುರದಲ್ಲಂತು ಟೋಲ್ ಶೀಟ್ಗಳು ದಿಕ್ಕಾಪಾಲಾಗಿವೆ.
ಇನ್ನು ಬೆಂಗಳೂರು ಮಾತ್ರವಲ್ಲ ಯಾದಗಿರಿ, ತುಮಕೂರು, ಚಿತ್ರದುರ್ಗ, ಹಾಸನ ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆಯಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಸೂರಿನಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಹಾಗೆಯೇ ಹಂದನಕೆರೆ ಗ್ರಾಮದಲ್ಲೂ ಗಂಗಮ್ಮ ಅನ್ನೋ ವೃದ್ಧೆ ಮೇಲೆ ರೇಷ್ಮೆ ಶೆಡ್ ಕುಸಿದು ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಚಿತ್ರದುರ್ಗದಲ್ಲೂ ವರುಣನ ಅಬ್ಬರ ಜೋರಾಗಿತ್ತು. ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲೂ ಇಂತದ್ದೇ ಘಟನೆ ಸಂಭವಿಸಿದೆ. ಹಾಸನದಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ನಾಲ್ಕೈದು ವರ್ಷಗಳಿಂದ ತುಂಬದ ಕೆರೆ ಇವತ್ತು ಒಂದೇ ದಿನ ಸುರಿದ ಮಳೆದ ಭರ್ತಿಯಾಗಿದೆ.