ಕರ್ನಾಟಕ

ಮೆಜೆಸ್ಟಿಕ್​ನಲ್ಲಿ ಗ್ರೆನೇಡ್​ ಸಿಕ್ಕ ಪ್ರಕರಣ; ತನಿಖೆಯಿಂದ ಸತ್ಯ ಬಯಲು

Pinterest LinkedIn Tumblr


ಬೆಂಗಳೂರು: ಕಳೆದ ನಾಲ್ಕೈದು ದಿನಗಳ ಹಿಂದೆ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಒಂದು​ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸರು ವಿಶೇಷ ತನಿಖೆ ಆರಂಭಿಸಿದ್ದರು. ತನಿಖೆಯಿಂದಾಗಿ ಈಗ ಸತ್ಯಸಂಗತಿ ಬಯಲಿಗೆ ಬಂದಿದೆ.

ರೈಲ್ವೆ ಹಳಿ ಮೇಲೆ ಬಿದ್ದಿದ್ದ ಗ್ರೆನೇಡ್​ ಸೇನಾ ಪಡೆಗೆ ಸೇರಿದ್ದಾಗಿದೆ ಎಂದು ತನಿಖೆಯಿಂದ ದೃಢಪಟ್ಟಿದೆ. ಸೇನಾಪಡೆಯವರು ಬಾಕ್ಸ್​ನಲ್ಲಿ ಗ್ರೆನೇಡ್​ಗಳನ್ನು ಕೊಂಡೊಯ್ಯುವಾಗ ರೈಲ್ವೆ ಹಳಿ ಮೇಲೆ ಬಿದ್ದಿತ್ತು ಎಂದು ನ್ಯೂಸ್​ 18 ಕನ್ನಡಕ್ಕೆ ಆರ್​ಪಿಎಫ್​ ಕಮಾಂಡೋ ಕಮೀಷನರ್ ಮಾಹಿತಿ ನೀಡಿದ್ದಾರೆ.

ಉನ್ನತ ಮಟ್ಟದ ತನಿಖೆ ವೇಳೆ ಈ ನಿಜಾಂಶ ಹೊರಬಿದ್ದಿದೆ. ಈ ತನಿಖೆಯಿಂದಾಗಿ ಸಾರ್ವಜನಿಕರಲ್ಲಿ ಇದ್ದ ಎಲ್ಲಾ ಊಹಾ-ಪೋಹ ಆತಂಕ ದೂರಾಗಿದೆ. ಸಮಾಜಘಾತುಕ ಉದ್ದೇಶದಿಂದ ತೆಗೆದುಕೊಂಡು ಬಂದದ್ದಲ್ಲ. ಅದು ಮಿಲಿಟರಿ ಯೋಧರ ತರಬೇತಿಗಾಗಿ ಕೊಂಡೊಯ್ಯುತ್ತಿದ್ದ ಗ್ರೆನೇಡ್​. ರೈಲಿನಲ್ಲಿ ಬಾಕ್ಸ್​ ಮೂಲಕ ಕೊಂಡೊಯ್ಯುವ ವೇಳೆ ಒಂದು ಗ್ರೆನೇಡ್​ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದಿದ್ದನ್ನು ಮಿಲಿಟರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನಿಸಲಿಲ್ಲ. ಯಾವುದೇ ಕಾರಣಕ್ಕೂ ಅದು ಸ್ಫೋಟವಾಗದ ಗ್ರೆನೇಡ್​ ಎಂಬುದು ಸ್ಪಷ್ಟವಾಗಿದೆ. ರೈಲ್ವೇ ಪೊಲೀಸರಿಗೆ ಸೇನೆಯ ಬ್ರಿಗೇಡಿಯರ್​ ಸ್ಪಷ್ಟನೆ ನೀಡಿದ್ದಾರೆ.

ಮೇ 30ರ ರಾತ್ರಿ ರೈಲ್ವೆ ಬೋಗಿಯಿಂದ ನಿರ್ಜೀವ ಗ್ರೆನೇಡ್ ಕೆಳಗೆ ಬಿದ್ದಿತ್ತು. 31ರ ಬೆಳಿಗ್ಗೆ ರೈಲ್ವೇ ಸಿಬ್ಬಂದಿಯ ಕಣ್ಣಿಗೆ ಗ್ರೆನೇಡ್​ ಕಾಣಿಸಿಕೊಂಡಿತ್ತು. ಇದರಿಂದ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದರು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ.

Comments are closed.