ಕರ್ನಾಟಕ

ಕುಮಾರಸ್ವಾಮಿಯಿಂದ ಹೊಸ ನಾಟಕ ಆರಂಭ: ಯಡಿಯೂರಪ್ಪ

Pinterest LinkedIn Tumblr


ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದಾರೆ. ರಾಜ್ಯದ ಹಿಂದುಳಿದ ಗ್ರಾಮ ಆಯ್ದುಕೊಂದು ಆ ಗ್ರಾಮದ ಶಾಲೆಗಳಲ್ಲಿ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಗ್ರಾಮದ ಮೂಲಸೌಕರ್ಯ ಜೊತೆಗೆ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೂ ಮುನ್ನುಡಿ ಬರೆಯಲಿದ್ದಾರೆ.

11 ವರ್ಷಗಳ ಹಿಂದೆ ಕುಮಾರಸ್ವಾಮಿ ಜಾರಿಗೆ ತಂದಿದ್ದ ವಿನೂತನ ಕಾರ್ಯಕ್ರಮ ಇದಾಗಿದೆ. ಹಳ್ಳಿ, ತಾಂಡಾ, ಹಟ್ಟಿ, ಬುಡಕಟ್ಟು ಪ್ರದೇಶಗಳಲ್ಲಿನ ವಾಸ್ತವ್ಯ ಕುಮಾರಸ್ವಾಮಿಗೆ ಹೆಸರು ತಂದುಕೊಟ್ಟಿತ್ತು. ಬಡವರು, ದಲಿತರು, ಅಲ್ಪಸಂಖ್ಯಾತರು ಅಷ್ಟೇ ಯಾಕೆ ಹೆಚ್ಐವಿ ಪೀಡಿತರ ಮನೆಯಲ್ಲೂ ವಾಸ್ತವ್ಯ ಮಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರಿನಿಂದ ಆರಂಭವಾಗಿದ್ದ ಗ್ರಾಮ ವಾಸ್ತವ್ಯ 20 ತಿಂಗಳ ಅವಧಿಯಲ್ಲಿ ಒಟ್ಟು 47 ಗ್ರಾಮಗಳಲ್ಲಿ ಬಿಡಾರ ಹೂಡಿದ್ದರು. ಇದರ ಫಲವಾಗಿ ಸಾಲಮನ್ನಾ, ಸಾರಾಯಿ ಹಾಗೂ ಲಾಟರಿ ನಿಷೇಧ, ಅಂಗವಿಕಲರಿಗೆ ಮಾಶಾಸನ ಸೇರಿ ಅನೇಕ ಯೋಜನೆ ಜಾರಿಗೆ ತಂದರು.

ಲೋಕಸಭಾ ಚುನಾವಣೆ ಸೋಲಿನ ಬಳಿಕ ಹಳೆಯ ಜನಪ್ರಿಯತೆ ಮರಳಿ ಗಳಿಸಲು ಕುಮಾರಸ್ವಾಮಿ ಮುಂದಾಗಿರುವಂತೆ ಕಾಣ್ತಿದೆ. ರೈತರ ಸಮಸ್ಯೆ ಆಲಿಸಲು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ವಿರೋಧ ಪಕ್ಷ ಬಿಜೆಪಿಯವರು ಮಾತ್ರ ಸಿಎಂ ಗ್ರಾಮವಾಸ್ತವ್ಯ ಅಪಹಾಸ್ಯ ಮಾಡಿದ್ದಾರೆ. ಶಾಲೆಗಳಿಗೆ ಸಿಎಂ ಮತ್ತೆ ಕಲಿಯಲು ಹೋಗ್ತಿದ್ದಾರೆ ಅಂತ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯ ಮಾಡಿದ್ದಾರೆ.

ಇತ್ತ, ಯಡಿಯೂರಪ್ಪ ಕೂಡ ಟೀಕಿಸಿದ್ದಾರೆ. ಕುಮಾರಸ್ವಾಮಿ ಹೊಸ ನಾಟಕ ಶುರು ಮಾಡ್ತಿದ್ದಾರೆ. ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿ ತಿಳಿಯದೇ ಶಾಲೆಗಳಲ್ಲಿ ಹೋಗಿ ವಾಸ್ತವ್ಯ ಮಾಡಲು ಹೋದರೆ ಜನ ಮೆಚ್ಚುವುದಿಲ್ಲ ಎಂದಿದ್ದಾರೆ. ಸಿಎಂಗೆ ಈಗ ಜ್ಞಾನೋದಯ ಆಗಿದೆ ಎಂದಿದ್ದಾರೆ ಸೋಮಣ್ಣ.

ಹಿಂದಿನ ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿರುವ ಸಂಸದೆ ಶೋಭಾ, ಜನರು ಅಧಿಕಾರ ಕೊಟ್ಟಿರೋದು ಗ್ರಾಮ ವಾಸ್ತವ್ಯ ಮಾಡಕ್ಕಲ್ಲ, ವಿಧಾನಸೌಧದಲ್ಲಿ ಕುತ್ಕೊಂಡು ಕೆಲಸ ಮಾಡಲು ಎಂದಿದ್ದಾರೆ.
ಒಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿದ್ದು, ಜನರಲ್ಲಿ ಮತ್ತೆ ನಂಬಿಕೆ ಹುಟ್ಟುವಂತೆ ಮಾಡಿವೆ. ಸಿಎಂ ಆಗಿ ಒಂದು ವರ್ಷದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದು ಕುಮಾರಸ್ವಾಮಿಗೂ ಮತ್ತದೇ ಮೈಲೇಜ್ ಸಿಗಬಹುದು.

Comments are closed.