ಕರ್ನಾಟಕ

ಬಳ್ಳಾರಿಯ ಮುನಾವರ್ ಬಿರಿಯಾನಿಗೆ ಫಿದಾ ಆದ ಬಾಲಿವುಡ್ ದಿಗ್ಗಜರು!

Pinterest LinkedIn Tumblr


ಬಳ್ಳಾರಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಬಂತಂದ್ರೆ ಸಾಕು ಮಾಂಸಾಹಾರ ಪ್ರಿಯರಿಗೆ ಎಲ್ಲಿಲ್ಲದ ಖುಷಿ. ಪ್ರತಿಯೊಬ್ಬರೂ ಹೈದ್ರಾಬಾದ್ ಬಿರಿಯಾನಿ ಬಗ್ಗೆ ಮಾತನಾಡುತ್ತಾರೆ. ಆದರೆ ಹೈದ್ರಾಬಾದ್​ನಲ್ಲಿ ಸಿಗುವ ಬಿರಿಯಾನಿಯ ರುಚಿ ಬಳ್ಳಾರಿಯಲ್ಲಿಯೂ ಸಿಗುತ್ತೆ. ಬಾಯಲ್ಲಿಟ್ಟುಕೊಂಡರೆ ಹಾಗೇ ಕರಗಿಹೋಗಿಬಿಡುತ್ತೇನೋ ಎಂಬಷ್ಟು ರುಚಿಯಾಗಿರುವ ಬಳ್ಳಾರಿಯ ಹೈದ್ರಾಬಾದ್ ಬಿರಿಯಾನಿಯ ಟೇಸ್ಟ್ ಮಾಡದವರೇ ಜಿಲ್ಲೆಯಲ್ಲಿ ಇಲ್ಲವೇನೋ ಎಂಬಷ್ಟು ಹೆಸರುವಾಸಿ. ಬೆಂಗಳೂರು ರಸ್ತೆಯ ಪುಟ್ಟದಾದ ಜಾಗದಲ್ಲಿ ಇದು ನಾನ್ ವೆಜ್ ಪ್ರಿಯರ ಹಾಟ್​ಸ್ಪಾಟ್ ಆಗಿದೆ.

ಹೋಟೆಲ್ ಮಾಲಿಕ ಮೊಹಮ್ಮದ್ ಮುನವರ್ ಹುಸೇನ್ ಅವರ ನಳಪಾಕದಲ್ಲಿ ತಯಾರಾದ ಬಿರಿಯಾನಿಯನ್ನು ಬಾಲಿವುಡ್ ದಿಗ್ಗಜರೂ ಸವಿದು ಭೇಷ್ ಬೇಷ್ ಎಂದು ಹೊಗಳಿದ್ದಾರೆ. ದುಬೈನಲ್ಲಿ ಹೋಟೆಲ್​ನಲ್ಲಿ ಕೆಲಸ ಮಾಡುವ ವೇಳೆ ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್, ಸಲ್ಮಾನ್ ಖಾನ್ ಅವರುಗಳೇ ಇವರ ಬಿರಿಯಾನಿ ಸವಿದಿದ್ದಾರೆ. ದಿಗ್ಗಜರಾದ ದಿಲೀಪ್ ಕುಮಾರ್, ಮೊಹಮ್ಮದ್ ರಫಿ, ಸಾಹಿರಾಬಾನು ಸೇರಿದಂತೆ ಅನೇಕ ನಟರು ಇವರ ಬಿರಿಯಾನಿ, ಹಲೀಮ್ ಸೇರಿದಂತೆ ಹಲವು ತಿನಿಸುಗಳ ರುಚಿ ನೋಡಿ ಫಿದಾ ಆಗಿದ್ದಾರೆ.

ಕಳೆದ 15 ವರುಷಗಳಿಂದ ಬಳ್ಳಾರಿಯಲ್ಲಿ ಪುಟ್ಟದಾದ ಹೋಟೆಲ್ ಇಟ್ಟುಕೊಂಡಿರುವ ಹುಸೇನ್ ಕಟ್ಟಿಗೆಯಲ್ಲಿಯೇ ವಿವಿಧ ಮಾಂಸಾಹಾರ ತಿನಿಸುಗಳ ಅಡುಗೆ ಮಾಡಿ ಜನರಿಗೆ ಉಣಬಡಿಸುತ್ತಿದ್ದಾರೆ. ಇವರ ನಳಪಾಕಕ್ಕೆ ಮನಸೋತವರು ಬಳ್ಳಾರಿಯ ಹೃದಯಭಾಗ ರಾಯಲ್ ವೃತ್ತದಲ್ಲಿ ದೊಡ್ಡದಾದ ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೈದ್ರಾಬಾದ್​ನ ಚಾದರಾಘಾಟ್​ನಲ್ಲಿ ಖ್ಯಾತ ಹೋಟೆಲ್​ನಲ್ಲಿ ಅಡುಗೆ ದಿನಿಸು ಕಲಿತು, ಒಮನ್ ದೇಶದ ಅಲುಬಾಸ್ತಾನ್ ಹೋಟೆಲ್​ನಲ್ಲಿ ಹತ್ತು ವರುಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ಮುನಾವರ್, ದುಬೈನಲ್ಲಿ ಕೆಲಸ ಮಾಡಿ ಬಳ್ಳಾರಿಯಲ್ಲಿ ಹೈದ್ರಾಬಾದ್ ಬಿರಿಯಾನಿ ಫಾಸ್ಟ್ ಫುಡ್ ನಡೆಸುವ ಮೂಲಕ ಸೆಟಲ್ ಆಗಿದ್ದಾರೆ.

ರಂಜಾನ್ ಹಬ್ಬದ ಸಂದರ್ಭದಲ್ಲಿಯಂತೂ ಹಲೀಮ್, ಸ್ಟಿಕ್ ಚಿಕನ್, ಖೈಮಾ ಬಾಲ್ಸ್, ಹೈದ್ರಾಬಾದ್​ನ ಫೇಮಸ್ ಚಿಕನ್ ಚಾರಾ ಸೇರಿದಂತೆ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ತಾವೇ ಖುದ್ದು ಮಸಾಲೆಗಳನ್ನು ತಯಾರಿಸಿ ಬಿರಿಯಾನಿ ಮಾಡುವುದು ಇವರ ಅಡುಗೆ ತಯಾರಿಯ ಮತ್ತೊಂದು ವಿಶೇಷ. ಪುಟ್ಟ ಹೋಟೆಲ್ ಆದರೂ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದಲೂ ಗಣ್ಯರು ಕಾರಿನಲ್ಲಿ ಆಗಮಿಸಿ ತಮಗೆ ಇಷ್ಟವಾದ ನಾನ್ ವೆಜ್ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಮೈಸೂರು, ಹಾಸನ ಸೇರಿದಂತೆ ಹಲವೆಡೆಗೆ ಪಾರ್ಸೆಲ್ ತರಿಸಿಕೊಂಡು ತಿನ್ನುವ ಬಿರಿಯಾನಿ ಅಭಿಮಾನಿಗಳೂ ಇದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಸೇರಿದಂತೆ ಶಾಸಕರು, ಮಾಜಿ ಸಚಿವರು ಗಣ್ಯಮಾನ್ಯರು ಇವರ ಬಿರಿಯಾನಿಗೆ ಫಿದಾ ಆಗಿದ್ದಾರೆ.

Comments are closed.