ಪ್ರೀತಿ ಮಾಯೆ ಹುಷಾರು ಅಂತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳೋ ಬೆಳದಿಂಗಳ ಬಾಲೆಯರ ಪ್ರೇಮಲೋಕದ ಕನಸು ಅರಳೋ ಮುನ್ನವೇ ನರಳಿ ನೇಣಿಗೆ ಕೊರಳು ಒಡ್ಡುವ ಪರಿಸ್ಥಿತಿಯನ್ನ ಸಾಕಷ್ಟು ನೋಡಿರ್ತೀವಿ. ಯಾಕಪ್ಪ ಇಷ್ಟೆಲ್ಲಾ ಪೀಠಿಕೆ ಅಂತ ಮಾಡಿದ್ರಾ..?
ನೋಡಿ ಈ ಹೆಣ್ಮಗಳ ಹೆಸರು ಕವಿತಾ.. ಮದುವೆಯ ಮುಂಚೆ ಆರಾಮಾಗಿ ಲೈಫಂದ್ರೆ ಹೀಗೆ ಹಾಗೆ ಅಂತ ಭಾವಿಸಿಕೊಂಡು ಕನಸ ಚಿತ್ತಾರದಲ್ಲೇ ಕುಣಿದಾಡ್ತಿದ್ಲು. ಆದ್ರೆ, ಲವ್ವೆಂಬ ಸ್ಲೋ ಪಾಯ್ಸನ್ ಏರಿಸಿಕೊಂಡು ಬಂದ ಆಟೋ ಡ್ರೈವರ್ ಸಂತೋಷ್ ಓಪಿಡಿ ಡಾಕ್ಟರ್ ರೀತಿ ಪ್ರೀತಿ ಚುಚ್ಚು ಮದ್ದನ್ನ ಕವಿತಾಳ ತಲೆಗೇರಿಸಿದ್ದ.
ಪ್ರೇಮಿ ಆಟೋವಾಲ ಆದ್ರೂ ಗುಂಡಿಗೆ ಜೇನುಗೂಡು ಅಂದ್ಕೊಂಡು ಜೋಡಿ ಆಗೋಣ ಅನ್ನೋ ಮಾತಾಡ್ಕೊಂಡೇ ಕತ್ತು ಬಗ್ಗಿಸಿ ತಾಳಿಕಟ್ಟಿಸಿಕೊಂಡು ಬಿಟ್ಟಿದ್ದಳು. ಮನೆಯಲ್ಲಿ ಬ್ಯಾಡವ್ವ, ನೋಡವ್ವ ದಿನಕಳೆದ್ರೆ ಕೇಡವ್ವ ಅಂದವರ ಬಾಯಿ ಮುಚ್ಚಿಸಿದ್ದ ಕವಿತಾ ಸೈಲೆಂಟಾಗೇ ಬೆಂಗಳೂರಿನ ಶಾಂತಿನಗರದ ಗಂಡನ ಮನೆಗೆ ಎಂಟ್ರಿ ಕೊಟ್ಟಿದ್ದಳು.
ಯಾವಾಗ ಪತಿರಾಯ ಸಂತೋಷ ಕಂಠಪೂರ್ತಿ ಕುಡಿದು ತಾನೊಬ್ಬ ಚಪ್ಪರ್ ಅಂತ ತೋರಿಸಿಕೊಂಡ್ನೋ ಆಗ್ಲೇ ಕವಿತಾಳ ನೂರಾಸೆಯ ಹೂವು ತರಗೆಲೆಯಂತೆ ಬಾಡಿ ಮಣ್ಣುಪಾಲಾಗಿತ್ತು. ಮೂರು ವರ್ಷದ ಕಂದಮ್ಮನನ್ನ ಕಂಕುಳಲ್ಲಿ ಕೊಟ್ಟು ನೋವಿನ ಬುತ್ತಿಯನ್ನ ಕೊಟ್ಟು ಹೋಗಿದ್ದ ಸಂತೋಷ ಅದರ ಜೊತೆ ಸಾಲದ ಹೊರೆಯನ್ನೂ ಹೊರಿಸಿ ಹೋಗಿದ್ದ. ಗಂಡ ಗಂಡನೇ ಅಲ್ಲ ಬಂಡ ಅಂತ ತಿಳೀತಿದ್ದ ಹಾಗೆ ಕವಿತಾ ಬದುಕಿನ ಬಂಡೆ ಹೊರಲಾರದೇ ಸೀದಾ ತನ್ನಮ್ಮನ ಮನೆಗೆ ತೆರಳಿ ಅಲ್ಲೇ ನೇಣಿಗೆ ಶರಣಾಗಿದ್ದಳು.
ಪ್ರೀತಿಯ ಪರದೆ ನೋಡೋಕೆ ಸ್ವಚ್ಚಂದವಾಗಿ ಕಾಣಿಸಿದ್ರೂ ಮುಖವಾಡದ ಪ್ರೀತಿ ಪಾತಾಳಕ್ಕೂ ತಳ್ಳುತ್ತೆ ಆಕಾಶಕ್ಕೂ ಏರಿಸುತ್ತೆ. ಆದ್ರೆ, ರಾಂಗು-ರೈಟಿನ ಸ್ಟ್ರೀಟು ಕಾಣಿಸದೇ ಹೋದ್ರೆ ಕಾಣುವ ಕನಸೇ ಮಸಣವಾಗಿಬಿಡುತ್ತೆ. ಯಾವ್ದಕ್ಕೂ ಪ್ರೀತಿಯ ರೀತಿ ನೀತಿಯನ್ನ ಅರ್ಥಮಾಡಿಕೊಳ್ಳಿ ತಾಳಿ ಕೊರಳೇರುವ ಮುನ್ನ.