ಕರ್ನಾಟಕ

ಸುಮಲತಾ ಕಾಂಗ್ರೆಸ್​ಗೆ ಸೇರ್ಪಡೆ? ಹೀಗೊಂದು ಪೋಸ್ಟರ್​ ಬ್ಯಾನರ್​ಗಳು!

Pinterest LinkedIn Tumblr


ಮಂಡ್ಯ; ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬಂದರೂ ಈಗಲೂ ರಾಜ್ಯದ ಜನತೆಯನ್ನು ಕಾಡುತ್ತಿರುವ ಏಕೈಕ ಪ್ರಶ್ನೆ ಎಂದರೆ, ಮಂಡ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗ್ತಾರ? ಅಥವಾ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸ್ತಾರ? ಎಂಬುದಾಗಿತ್ತು. ಆದರೆ ಈ ಪ್ರಶ್ನೆಗೆ ಇಂದು ಬಹುತೇಕ ಉತ್ತರ ಸ್ಪಷ್ಟವಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.

ಇಂದು ಮಂಡ್ಯದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಎನ್​. ಚೆಲುವರಾಯಸ್ವಾಮಿಯವರ ಹುಟ್ಟುಹಬ್ಬ. ಹೀಗಾಗಿ ಸುಮಲತಾ ಚೆಲುವರಾಯಸ್ವಾಮಿಯವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿರುವ ಸುಮಲತಾ, “ನನ್ನ ಹಿತೈಷಿ ಹಾಗೂ ಮಂಡ್ಯ ಜನರ ಪ್ರೀತಿ ಪಾತ್ರರಾದ ಚಲುವರಾಯಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಚುನಾವಣೆ ಸಂದರ್ಭದಲ್ಲೂ ಸಹ ಸುಮಲತಾ ಚೆಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಎಲ್ಲಾ ಕಾಂಗ್ರೆಸ್​ ನಾಯಕರಿಗೂ ಔತಣಕೂಟ ಏರ್ಪಡಿಸಿದ್ದರು. ಈ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿತ್ತು. ಅಲ್ಲದೆ ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ಚೆಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಸಹಕಾರ ಇತ್ತು. ಹೀಗಾಗಿಯೇ ಸುಮಲತಾ ಭಾರೀ ಅಂತರದ ಗೆಲುವು ಸಾಧಿಸುವುದು ಸಾಧ್ಯವಾಗಿತ್ತು ಎಂಬ ವಿಚಾರವೂ ಈಗ ಗುಟ್ಟಾಗೇನು ಉಳಿದಿಲ್ಲ.

ಕಳೆದ ಕೆಲ ದಿನಗಳಿಂದ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಈ ನಡುವೆ ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಬಾರದು ಎಂದು ಮಂಡ್ಯದ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದರು. ಒಂದೆಡೆ ಬಿಜೆಪಿ ಹಾಗೂ ಮತ್ತೊಂದೆಡೆ ಕಾಂಗ್ರೆಸ್ ಎರಡೂ ಪಕ್ಷದ ನಾಯಕರೂ ಸುಮಲತಾ ಅವರನ್ನು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಇಂದು ಕೊನೆಗೂ ಸುಮಲತಾ ಕಾಂಗ್ರೆಸ್​ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಮಂಡ್ಯದಲ್ಲಿ ರಾರಾಜಿಸುತ್ತಿದೆ ಸುಮಲತಾ ಬ್ಯಾನರ್​ ಪೋಸ್ಟರ್:
ಸುಮಲತಾ ಕಾಂಗ್ರೆಸ್ ಸೇರ್ಪಡೆಗೊಳ್ಳುವ ವಿಚಾರ ಬಹುತೇಕ ಖಚಿತವಾಗಲು ಇಂದು ಮಂಡ್ಯ ಜಿಲ್ಲೆಯಲ್ಲಿ ಎಲ್ಲೆಡೆ ರಾರಾಜಿಸುತ್ತಿರುವ ಅವರ ಪೋಸ್ಟರ್​ ಹಾಗೂ ಬ್ಯಾನರ್​ಗಳು.

ರಾಜಕೀಯ ನಾಯಕರ ಹುಟ್ಟುಹಬ್ಬ ಬಂದರೆ ಮಂಡ್ಯ ಜಿಲ್ಲೆ ಪೋಸ್ಟರ್​ ಹಾಗೂ ಬ್ಯಾನರ್​ಗಳನ್ನು ಕಟ್ಟುವುದು ತೀರಾ ಮಾಮೂಲಿ ವಿಚಾರ ಆದರೆ, ಇಂದು ಚೆಲುವರಾಯಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ನೂತನ ಸಂಸದೆ ಸುಮಲತಾ ಕಾಂಗ್ರೆಸ್ ರಾಜ್ಯ, ಜಿಲ್ಲಾ ಮುಖಂಡರುಗಳೊಂದಿಗಿರುವ ಭಾವಚಿತ್ರಗಳು ರಾರಾಜಿಸುತ್ತಿದ್ದು, ಸಾಮಾನ್ಯವಾಗಿ ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಸೇರಿದಂತೆ ಕೈ ಮುಖಂಡರ ಭಾವಚಿತ್ರದ ಜೊತೆ ಸುಮಲತಾ ಮಾಜಿ ಸಚಿವ ಎನ್​. ಚೆಲುವರಾಯಸ್ವಾಮಿ ಹುಟ್ಟುಹಬ್ಬಕ್ಕೆ ಶುಭಕೋರುವ ಪೋಟೋಗಳು ಕಣ್ಣುಕೋರೈಸುತ್ತಿವೆ. ಇವನ್ನೆಲ್ಲ ನೋಡಿದರೆ ಸುಮಲತಾ ಶೀಘ್ರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಕಾಂಗ್ರೆಸ್ ಮೂಲಕವೇ ತಮ್ಮ ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳಲಿದ್ದಾರೆ ಎನ್ನುತ್ತಿವೆ ನಂಬಿಕಾರ್ಹ ಮೂಲಗಳು.

Comments are closed.