ಒಂದು ಹೊತ್ತಿನ ತುತ್ತು ಅನ್ನಕ್ಕು ಕಷ್ಟ. ಇದ್ದ ಚಿಕ್ಕ ಭೂಮಿ ಉಳುಮೆ ಮಾಡಲು ಎತ್ತುಗಳಾಗಲಿ ಯಂತ್ರಗಳಾಗಲಿ ಇವರಿಗೆ ಕನಸಿನ ಮಾತು. ಆದರೂ ಈ ಅಣ್ಣ ತಂಗಿಯರೇ ಅವರ ಹೊಲಕ್ಕೆ ಜೋಡೆತ್ತುಗಳು. ತುತ್ತು ಅನ್ನಕ್ಕಾಗಿ ಹೊಲದಲ್ಲಿ ಉಳುಮೆ ಮಾಡಲು ತಂಗಿ ಹಿಡಿದ ನೇಗಿಲಿಗೆ ಅಂಗವಿಕಲ ಅಣ್ಣನೇ ಎತ್ತಾಗಿ ಭೂಮಿ ಉಳುಮೆ ಮಾಡಿದ ಮನಕಲಕುವ ಘಟನೆ ಕಾರವಾರದ ಗುನಗಿವಾಡದಲ್ಲಿ ನಡೆದಿದೆ.
ಇದ್ದ ಇಪ್ಪತ್ತು ಗುಂಟೆ ಕೃಷಿ ಜಮೀನೇ ಕಾರವಾರದ ಅಂಗವಿಕಲ ಗಿರಿಧರ್ ಗುನುಗಿಗೆ ಜೀವನಾಧಾರ.ಇದರಿಂದ ಮೂರು ಜನರ ಹೊಟ್ಟೆ ತುಂಬಬೇಕು ಎತ್ತುಗಳನ್ನು ಇಟ್ಟುಕೊಳ್ಳದಷ್ಟು ಬಡತನ. ಹೀಗಾಗಿ ಅಂಗವಿಕಲ ಅಣ್ಣನೇ ಭೂಮಿ ಉಳುಮೆ ಮಾಡಲು ಎತ್ತಿನಂತೆ ನೇಗಿಲಿಗೆ ಹೆಗಲು ಕೊಟ್ಟರೇ ತಂಗಿ ಸುಜಾತ ನೇಗಿಲು ಹಿಡಿದು ಉಳುಮೆ ಮಾಡುತ್ತಾರೆ.
ಎಂಟರಿಂದ ಹತ್ತು ವರ್ಷಗಳಿಂದ ಅಣ್ಣ ತಂಗಿ ಹಿಡಿದ ನೇಗಿಲಿಗೆ ಹೆಗಲು ಕೊಡುತಿದ್ದು ಬೇಸಿಗೆಯಲ್ಲಿ ತರಕಾರಿ ಬೆಳೆದು ಬಂದ ಫಸಲನ್ನು ನಗರದಲ್ಲಿ ಮಾರಿ ಜೀವನ ಸಾಗಿಸುತ್ತಾರೆ,ಮಳೆಗಾಲದಲ್ಲಿ ಭತ್ತ ಬೆಳೆದರೆ ಕಟಾವು ಆಗುವ ವರೆಗೆ ಹೊಟ್ಟೆ ಹೊರೆದುಕೊಳ್ಳಲು ಗಿರಿಧರ್ ಮೀನು ಹಿಡಿಯಲು ಹೋಗುತ್ತಾರೆ,ಮಳೆಗಾಲ ಮುಗಿಯುವ ವರೆಗೆ ಈ ಮೀನೇ ಇವರಿಗೆ ಆಹಾರವಾಗಿದ್ದು ಕಡುಕಷ್ಟ ಅನುಭವಿಸಿದರೂ ಯಾರಲ್ಲೂ ಬೇಡದೇ ಸ್ವಾವಲಂಭಿ ಬದುಕು ನಡೆಸುತಿದ್ದು ಎಲ್ಲರಿಗೂ ಮಾದರಿ ಯಾಗಿದ್ದಾರೆ.