ನವದೆಹಲಿ: ಕೇಂದ್ರದ ಎನ್ಡಿಎ-2 ಸರ್ಕಾರ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಸಾಧ್ಯತೆ ಇದೆ. ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ನೇತೃತ್ವದ ಹೊಸ ಶಿಕ್ಷಣ ನೀತಿ(ಎನ್ಇಪಿ) ಸಮಿತಿಯು ಹೊಸ ಶಿಕ್ಷಣ ವ್ಯವಸ್ಥೆಗೆ ಕರಡು ಸಿದ್ಧಪಡಿಸಿದ್ದು, 1968ರಿಂದಲೂ ಅಸ್ತಿತ್ವದಲ್ಲಿರುವ ಪದ್ಧತಿಗೆ ತಿಲಾಂಜಲಿ ಹೇಳಲು ಶಿಫಾರಸು ಮಾಡಿದೆ. 1968ರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ 10+2 ಮಾದರಿಯ ಶಿಕ್ಷಣದ ಬದಲು 5+3+3+4 ಮಾದರಿಯ ಶಿಕ್ಷಣಕ್ಕೆ ಎನ್ಇಪಿ ಶಿಫಾರಸು ಮಾಡಿದೆ.
ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿರುವ ಶಿಕ್ಷಣ ಪದ್ಧತಿಯು ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಗೆ ಒಂದು ಗಟ್ಟಿ ತಳಹದಿ ಹಾಕಿದೆ. ಆದರೆ, ಆಧುನಿಕ ಕಾಲಘಟ್ಟದಲ್ಲಿ ಹೊಸ ವೈಜ್ಞಾನಿಕ ಕಲಿಕಾ ವಿಧಾನಗಳು ಲಭ್ಯವಿರುವಾಗ ಹೊಸ ಮಾದರಿಯ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು ಎನ್ಇಪಿ ಸಮಿತಿ ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿಗಳನ್ನು 21ನೇ ಶತಮಾನಕ್ಕೆ ತಯಾರು ಮಾಡುವುದೇ ಈ ಶಿಕ್ಷಣ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಸಮಿತಿ ಹೇಳಿದೆ. ಒಟ್ಟು 15 ವರ್ಷಗಳ ಅವಧಿಯ ಈ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಭಾಷೆ, ಸಂವಹನ, ವೈಜ್ಞಾನಿಕ ಮನೋಭಾವ, ಸಾಮಾಜಿಕ-ಭಾವನಾತ್ಮಕ ಕಲಿಕೆ, ತಾರ್ಕಿಕತೆ ಇತ್ಯಾದಿಗಳ ಜೊತೆಗೆ ಭಾರತೀಯ ಮತ್ತು ಜಾನಪದೀಯ ಪರಂಪರೆ ಬಗ್ಗೆ ತಿಳಿವಳಿಕೆ ಮೂಡಿಸುತ್ತದೆ. ಜೊತೆಗೆ, ವಿಷಯಗಳ ಬಗ್ಗೆ ಅವರಲ್ಲಿ ಕುತೂಹಲದ ಹಸಿವನ್ನು ಹೆಚ್ಚಿಸುವಂತೆ ಮಾಡುತ್ತದೆ ಎಂಬುದು ಸಮಿತಿಯ ಅನಿಸಿಕೆ.
ಈಗಿರುವ ಪದ್ಧತಿ ಹೇಗೆ?
ಈಗಿರುವ ಪದ್ಧತಿಯಲ್ಲಿ ಪ್ರಾಥಮಿಕ ಮಟ್ಟದಿಂದ ಪ್ರೌಢಶಾಲಾ ಹಂತವರೆಗೆ 10+2 ಮಾದರಿಯ ಶಿಕ್ಷಣ ವ್ಯವಸ್ಥೆ ಇದೆ. ಅಂದರೆ 1-4ನೇ ತರಗತಿಯವರೆಗೆ ಪ್ರಾಥಮಿಕ ಹಂತ; 5-7ರವರೆಗೆ ಮಾಧ್ಯಮಿಕ ಹಂತ; 8-10ರವರೆಗೆ ಪ್ರೌಢಶಿಕ್ಷಣ; 11-12ನೇ ತರಗತಿಯು ಉನ್ನತ ಪ್ರೌಢ ಶಿಕ್ಷಣ ಅಥವಾ ಪದವಿ ಪೂರ್ವ ಶಿಕ್ಷಣ ಎಂದು ವಿಭಾಗೀಕರಿಸಲಾಗಿದೆ. ಇಲ್ಲಿ ಒಂದೇ ತರಗತಿಯಿಂದಲೇ ಪಠ್ಯ ಪುಸ್ತಕವನ್ನು ಹಂತ ಹಂತವಾಗಿ ಅಳವಡಿಸಲಾಗುತ್ತದೆ.
ಹೊಸ ಪದ್ಧತಿ ಹೇಗೆ?
ಎನ್ಇಪಿ ಶಿಫಾರಸು ಮಾಡಿರುವ ಶಿಕ್ಷಣ ನೀತಿಯು 12ನೇ ತರಗತಿಯವರೆಗಿನ ಶಿಕ್ಷಣವನ್ನು ಐದು ಹಂತಗಳಾಗಿ ವಿಭಜಿಸಿದೆ. 3ನೇ ವಯಸ್ಸಿನಿಂದ 18ನೇ ವಯಸ್ಸಿನವರೆಗೆ ಮಕ್ಕಳು ನಲಿಯುತ್ತಾ ಕಲಿಯುತ್ತಾ ಹಂತ ಹಂತವಾಗಿ ವಿಷಯವಾರು ಪ್ರೌಢಿಮೆ ಬೆಳೆಸಿಕೊಳ್ಳುವಂತೆ ವ್ಯವಸ್ಥೆ ರೂಪಿಸಲಾಗಿದೆ.
3ರಿಂದ 7ನೇ ವಯಸ್ಸಿನವರೆಗಿನ 5 ವರ್ಷಗಳ ಅವಧಿಯನ್ನು ಫೌಂಡೇಶನ್ ಹಂತವೆಂದು ಪರಿಗಣಿಸಲಾಗಿದೆ. ಅಂದರೆ, ವಿದ್ಯಾರ್ಥಿಗಳಲ್ಲಿ ಮೂಲಭೂತ ಅಂಶಗಳು ಗಟ್ಟಿಯಾಗಿ ತಳವೂರುವ ಅವಧಿ ಇದಾಗಿದೆ. ಇದರಲ್ಲಿ ಮೊದಲ ಮೂರು ವರ್ಷವು ಪ್ರಾಥಮಿಕ ಪೂರ್ವ ಶಾಲೆ ಎಂದು ಪರಿಗಣಿಸಲಾಗಿದೆ. ನಂತರದ 2 ವರ್ಷವನ್ನು ಗ್ರೇಡ್ 1 ಮತ್ತು 2 ಎಂದು ಪರಿಗಣಿಸಲಾಗುತ್ತದೆ.
ನಂತರದ ಮೂರು ವರ್ಷವನ್ನು ಗ್ರೇಡ್ 3, 4 ಮತ್ತು 5 ಎಂದು ಪರಿಣಸಲಾಗಿದ್ದು, ಇದು ಪೂರ್ವತಯಾರಿ ಹಂತವೆಂದು ಕರೆಯಲಾಗಿದೆ.
ಅದಾದ ಬಳಿಕ ಮೂರು ವರ್ಷಗಳನ್ನ ಗ್ರೇಡ್ 6 7 ಮತ್ತು 8 ಎನ್ನಲಾಗುತ್ತದೆ. ಇದು ಮಾಧ್ಯಮಿಕ ಶಿಕ್ಷಣ ಹಂತವಾಗಿದೆ.
ಆ ನಂತರದ ನಾಲ್ಕು ವರ್ಷಗಳು ಗ್ರೇಡ್ 9, 10, 11 ಮತ್ತು 12 ಆಗಿದ್ದು, ಇದು ಪ್ರೌಢ ಶಿಕ್ಷಣ ಹಂತವಾಗಿರುತ್ತದೆ.
ವಿಶೇಷತೆ ಏನು?
ಸರಳವಾಗಿ ಹೇಳಬೇಕೆಂದರೆ, ಈಗಿರುವ ವ್ಯವಸ್ಥೆಯಲ್ಲಿ ತರಗತಿಯ ಬದಲು ಇಲ್ಲಿ ಗ್ರೇಡ್ ಹೆಸರು ಕೊಡಲಾಗಿದೆ. ಆದರೆ, ವಿಶೇಷ ಬದಲಾವಣೆ ಇರುವುದು ಶಿಕ್ಷಣದ ಹೂರಣ ಮತ್ತು ಹೇಳಿಕೊಡುವ ಕ್ರಮದಲ್ಲಿ.
ಗ್ರೇಡ್ 2ರವರೆಗಿನ 5 ವರ್ಷಗಳ ಮೊದಲ ಹಂತದಲ್ಲಿ ನಲಿ ಕಲಿ ತತ್ವದಂತೆ ಶಿಕ್ಷಣ ಹೇಳಿಕೊಡಲಾಗುತ್ತದೆ. ಸಿಲಬಸ್ ಪ್ರಕಾರ ಪಾಠ ಕಲಿಯುವುದಕ್ಕಿಂತ ಹೆಚ್ಚಾಗಿ ಆಟ, ಚಟುವಟಿಕೆ ಮೂಲಕ ವಿಷಯಗಳನ್ನ ಕಲಿಸಿಕೊಡುವುದಕ್ಕೆ ಹೆಚ್ಚು ಗಮನ ಕೊಡಲಾಗುತ್ತದೆ. ವಿದ್ಯಾರ್ಥಿಗಳ ಕಲಿಕಾ ಮನಸ್ಥಿತಿಯ ಬಗ್ಗೆ ನಡೆದಿರುವ ಇತ್ತೀಚಿನ ಸಂಶೋಧನೆಗಳ ಆಧಾರದ ಮೇಲೆ ಈ ಹಂತದಲ್ಲಿ ಶಿಕ್ಷಣದ ಪಠ್ಯಕ್ರಮವನ್ನು ರೂಪಿಸಲಾಗಿದೆ.
ಮೂರು ವರ್ಷಗಳ ಎರಡನೇ ಹಂತದಲ್ಲಿ ನಲಿ ಕಲಿ ತತ್ವವನ್ನೇ ಮುಂದುವರಿಸಲಾಗುತ್ತದೆ. ಜೊತೆಗೆ, ಪಠ್ಯ ಪುಸ್ತಕಗಳನ್ನು ಹಂತಹಂತವಾಗಿ ಅಳವಡಿಸಲಾಗುತ್ತದೆ. ತರಗತಿಯ ಕೋಣೆಯೊಳಗೆ ಕುಳಿತು ಕಲಿಯುವುದನ್ನು ವಿದ್ಯಾರ್ಥಿಗಳಲ್ಲಿ ರೂಢಿಸಲಾಗುತ್ತದೆ.
ಗ್ರೇಡ್ 5ವರೆಗೂ ಮಕ್ಕಳಿಗೆ ಸಾಮಾನ್ಯ ಶಿಕ್ಷಕರೇ ಮಾರ್ಗದರ್ಶನ ಮಾಡಬೇಕು. ಭಾಷೆ ಮತ್ತು ಕಲೆ ಬಗ್ಗೆ ಮಾತ್ರ ವಿಷಯ ನುರಿತ ಶಿಕ್ಷಕರನ್ನು ನಿಯೋಜಿಸಬಹುದು. ಈ ಹಂತ ಪೂರ್ಣಗೊಳ್ಳುವಷ್ಟರಲ್ಲಿ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿಚಾರಗಳಲ್ಲಿ ತಕ್ಕಮಟ್ಟಿಗಿನ ಮೂಲಭೂತ ತಿಳಿವಳಿಕೆ ಬಂದಿರಬೇಕು. ಓದುವುದು, ಬರೆಯುವುದು, ಮಾತನಾಡುವುದು, ಭಾಷೆಗಳು, ವಿಜ್ಞಾನ, ಗಣಿತ ಇತ್ಯಾದಿ ವಿಚಾರಗಳ ಸಾಮಾನ್ಯ ಜ್ಞಾನ ಮಕ್ಕಳಲ್ಲಿ ಮೂಡಿರಬೇಕು ಎಂದು ಎನ್ಇಪಿ ಸಮಿತಿ ಶಿಫಾರಸು ಮಾಡಿದೆ.
ಗ್ರೇಡ್ 6-8ರವರೆಗಿನ ಹಂತದಲ್ಲಿ ಪಠ್ಯಕ್ರಮವನ್ನು ಅನುಸರಿಸಲಾಗುತ್ತದೆ. ವಿವಿಧ ವಿಚಾರಗಳಲ್ಲಿ ನುರಿತ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತದೆ. ಆದರೆ, ವಿಷಯ ಕಲಿಕೆಗಿಂತ ಅನ್ವೇಷಣೆ, ಪ್ರಯೋಗಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ.
ಅದಾದ ಬಳಿಕ ಗ್ರೇಡ್9ರಿಂದ 12ರವರೆಗಿನ ಪ್ರೌಢ ಶಿಕ್ಷಣ ಹಂತದಲ್ಲಿ ವಿವಿಧ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮಿಚ್ಛೆಯ ವಿಷಯಗಳನ್ನು ಕಲಿಯಲು ಪ್ರೋತ್ಸಾಹ ಕೊಡಲಾಗುತ್ತದೆ. ಜೀವನದ ಉದ್ದೇಶಗಳನ್ನ ತಿಳಿದುಕೊಂಡು ಅದರಂತೆ ಶಿಕ್ಷಣ ಪಡೆಯುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಈ ಪ್ರೌಢ ಶಿಕ್ಷಣ ಹಂತದಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಲಾಗುತ್ತದೆ. ಅದರಂತೆ ಈ 4 ವರ್ಷಗಳಲ್ಲಿ 8 ಸೆಮಿಸ್ಟರ್ಗಳಿರುತ್ತವೆ. ಪ್ರತೀ ಸೆಮಿಸ್ಟರ್ನಲ್ಲೂ ವಿದ್ಯಾರ್ಥಿಯು ಐದರಿಂದ 6 ವಿಷಯಗಳನ್ನ ಆಯ್ಕೆ ಮಾಡಿಕೊಳ್ಳಬಹುದು. ಕೆಲ ಸಾಮಾನ್ಯ ವಿಷಯಗಳ ಜೊತೆಗೆ ವಿದ್ಯಾರ್ಥಿಯು ತನ್ನ ಆಸಕ್ತಿಗೆ ಮತ್ತು ಪ್ರತಿಭೆಗೆ ತಕ್ಕಂತೆ ಕೆಲ ವಿಷಯಗಳನ್ನ ಆರಿಸಿಕೊಂಡು ಶಿಕ್ಷಣ ಪಡೆಯಬಹುದು.
ಒಟ್ಟಾರೆಯಾಗಿ, ಹೊಸ ಶಿಕ್ಷಣ ನೀತಿಯು ನಲಿ ಕಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಬೆಳೆಸುವುದು; ಸೃಜನಶೀಲತೆಯ ಮನಸು ಮೂಡಿಸುವುದು; ಪ್ರಯೋಗಗಳ ಮೂಲಕ ಕಲಿಯುವುದಕ್ಕೆ ಹೆಚ್ಚು ಗಮನ ಹರಿಸುತ್ತದೆ.