ಮೈತ್ರಿ ಸರ್ಕಾರದ ಮೇಲೆ ಅಸ್ಥಿರತೆಯ ತೂಗುಗತ್ತಿ ನೇತಾಡುತ್ತಿದೆ. ಬಿಜೆಪಿಯ ಅಭೂತಪೂರ್ವ ಗೆಲುವು ದೋಸ್ತಿಗಳ ಎದೆ ನಡುಗಿಸಿದೆ. ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ಬುಡವೂ ಗಡ ಗಡ ಅನ್ನುತ್ತಿದೆ. ಆಪರೇಶನ್ ಕಮಲದಿಂದ ಸರ್ಕಾರ ಬಚಾವ್ ಮಾಡೋಕೆ ಸಂಪುಟ ಪುನರಚನೆ ತಂತ್ರಕ್ಕೆ ದೋಸ್ತಿಗಳು ಮೊರೆಹೋಗಿದ್ದಾರೆ.
ಆಪರೇಶನ್ ಕಮಲದ ಸುಳಿಯಲ್ಲಿ ದೋಸ್ತಿ ಸರ್ಕಾರ
ಸರ್ಕಾರ ಉಳಿಸಿಕೊಳ್ಳೋಕೆ ಮರೆಯಲೇಬೇಕು ಅಪಸ್ವರ
ಇಲ್ಲದಿದ್ದರೆ ದೋಸ್ತಿ ಸರ್ಕಾರ ಹರೋಹರ
ಲೋಕಸಭೆ ಮಹಾ ಸಮರದಲ್ಲಿ ಸೋತು ಮತದಾರ ಪ್ರಭುವಿನ ತೀರ್ಪಿಗೆ ಕಾಂಗ್ರೆಸ್ – ಜೆಡಿಎಸ್ ಮಂಡಿಯೂರಿವೆ. ಕರ್ನಾಟಕದಲ್ಲಿ ಬರೋಬ್ಬರಿ 25 ಸೀಟು ಗೆದ್ದು ಭಾರೀ ಹುಮ್ಮಸ್ಸಿನಲ್ಲಿರುವ ಬಿ.ಎಸ್.ವೈ ಪಡೆಗೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹಂಬಲ ಮತ್ತಷ್ಟು ಇಮ್ಮಡಿಯಾಗಿದೆ. ಹೀಗಾಗಿ ಆಪರೇಶನ್ ಕಮಲ ಈ ಬಾರಿ ಸಕ್ಸಸ್ ಮಾಡಲು ಬಿಜೆಪಿ ಭರ್ಜರಿ ವೇದಿಕೆ ಅಣಿಗೊಳಿಸುತ್ತಿದೆ.
ಭಿನ್ನಾಭಿಪ್ರಾಯಗಳಿಂದಾಗೇ ಹೀನಾಯ ಸೋಲನುಭವಿಸಿರುವ ದೋಸ್ತಿಗಳಿಗೆ ಸರ್ಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ. ಇಲ್ಲದಿದ್ದರೆ ರಾಜಕೀಯದಲ್ಲಿ ಮೂಲೆಗುಂಪಾಗೋದು ಗ್ಯಾರಂಟಿ. ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳಲು ಈ ಮೈತ್ರಿ ಪಕ್ಷಗಳ ಮುಖಂಡರು ಭಾರೀ ಕಸರತ್ತು ನಡೆಸಿದ್ದಾರೆ.
ರೆಬೆಲ್ಗಳ ಮನವೊಲಿಕೆಗೆ ರೆಡಿಯಾಯ್ತು ಪ್ಲಾನ್
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ..!
ಮಂತ್ರಿಗಿರಿಗೆ ಆಸೆ ಪಟ್ಟು ಬಿಜೆಪಿ ಸೇರಲು ಮುಂದಾಗಿರುವ ಅತೃಪ್ತ ಶಾಸಕರನ್ನು ಮನವೊಲಿಸಲು ಮೈತ್ರಿ ಮುಖಂಡರು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಮಾಡುವ ಮೂಲಕ ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು. ಈ ಮೂಲಕ ಬಿಜೆಪಿಗೆ ಹೋಗದಂತೆ ತಡೆಯುವ ತಂತ್ರಗಾರಿಕೆ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿರುವ ಮಹೇಶ್ ಕುಮಟಳ್ಳಿ ಜೊತೆ ಇಂದು ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಸಂಪುಟದಲ್ಲಿರುವ ಕೆಲ ಹಿರಿಯ ಸಚಿವರಿಗೆ ಕೊಕ್ ಕೊಟ್ಟು ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡುವ ಚರ್ಚೆ ನಡೆದಿದೆ. ಬಿ.ಸಿ ಪಾಟೀಲ್, ನಾಗೇಂದ್ರ ಸೇರಿದಂತೆ ಹಲವು ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿದೆ.
ಸದ್ಯ ಒಂದು ಕಡೆ ಸರ್ಕಾರ ಕೆಡವಿ ನಾವು ಅಧಿಕಾರಕ್ಕೆ ಬರಲೇ ಬೇಕು ಅಂತ ಬಿಎಸ್.ವೈ ಟೀಂ ಭಾರಿ ಪ್ರಯತ್ನ ನಡೆಸಿದೆ. ಇತ್ತ ಇರೋ ಅಸ್ತಿತ್ವ ಉಳಿಸಿಕೊಳ್ಳೋಕೆ ದೋಸ್ತಿಗಳು ಪರದಾಡುವಂತಾಗಿದೆ.