ಕರ್ನಾಟಕ

ಸರ್ಕಾರ ಬೇಕೋ ಬೇಡವೋ ಹೇಳಿ; ಕಾಂಗ್ರೆಸ್​​ಗೆ ದೇವೇಗೌಡ ಖಡಕ್​ ಸಂದೇಶ

Pinterest LinkedIn Tumblr


ಬೆಂಗಳೂರು: ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್​ – ಜೆಡಿಎಸ್​ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎರಡೂ ಪಕ್ಷಗಳ ನಡುವೆ ಭಿನ್ನಮತದ ಆಗಾಗ ಭುಗಿಲೇಳುತ್ತಲೇ ಇದೆ. ಅದರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕರ್ನಾಟಕ ಸಮ್ಮಿಶ್ರ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ ಎಂಬಂತ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಆಪರೇಷನ್​ ಕಮಲದ ಭೀತಿಯಾದರೆ ಇನ್ನೊಂದೆಡೆ ಕಾಂಗ್ರೆಸ್​ ಪಕ್ಷದ ಅತೃಪ್ತ ಶಾಸಕರು ಪದೇ ಪದೇ ಬಂಡಾಯದ ಕಹಳೆ ಮೊಳಗಿಸುತ್ತಲೇ ಇದ್ದಾರೆ.

ಇದೀಗ ಎರಡೂ ಪಕ್ಷಗಳ ನಡುವಿನ ಭಿನ್ನಮತ ಮತ್ತು ಕಾಂಗ್ರೆಸ್​ ಪಕ್ಷದೊಳಗಿನ ಆಂತರಿಕ ಕಿತ್ತಾಟ ಮತ್ತೆ ಮುನ್ನಲೆಗೆ ಬಂದಿದ್ದು ರಮೇಶ್​ ಜಾರಕಿಹೊಳಿ, ರೋಷನ್​ ಬೇಗ್​ ಸೇರಿದಂತೆ ಹಲವು ಕಾಂಗ್ರೆಸ್​ ಹಿರಿಯ ನಾಯಕರು ಬಿಜೆಪಿಯ ಕಡೆ ಮುಖ ಮಾಡಿ ನಿಂತಿದ್ದಾರೆ. ದಿನಬೆಳಗಾದರೆ ಆಪರೇಷನ್​ ಭೀತಿಯಲ್ಲೇ ಸರ್ಕಾರ ಸಾಗುತ್ತಿರುವುದನ್ನು ಕಂಡು ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ ಅವರು ಕೆಂಡಾಮಂಡಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉನ್ನತ ಮೂಲಗಳ ಪ್ರಕಾರ, ಕೈ ನಾಯಕರಿಗೆ ಇಂದು ಬೆಳಗ್ಗೆ ದೇವೇಗೌಡ ಖಡಕ್​ ಸಂದೇಶ ರವಾನಿಸಿದ್ದಾರೆ. ಪ್ರತಿದಿನ ನಮ್ಮಿಂದ ಎಳೆದಾಟ ಸಾಧ್ಯವಿಲ್ಲ, ಅಧಿಕಾರಕ್ಕಾಗಿ ನಾವು ಅಂಟಿಕೊಂಡಿಲ್ಲ. ಚುನಾವಣೆಯಲ್ಲಂತೂ ಕಾಂಗ್ರೆಸ್ ಬೆಂಬಲ ಸಿಕ್ಕಿಲ್ಲ. ಸರ್ಕಾರ ಮುನ್ನಡೆಸಲು ಸೂಕ್ತ ಬೆಂಬಲ ಸಿಗುತ್ತಾ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್​ ರಾಜ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಮೂಲಕ ಕೈ ಹೈಕಮಾಂಡ್​ಗೆ ದೇವೇಗೌಡರು ಕೇಳಿದ್ದಾರೆ.

ಮೂಲಗಳ ಪ್ರಕಾರ ಇಂದು ಬೆಳಗ್ಗೆ ದಿನೇಶ್​ ಗುಂಡೂರಾವ್​ ಅವರನ್ನು ತಮ್ಮ ಪದ್ಮನಾಭನಗರ ಮನೆಗೆ ಕರೆಸಿಕೊಂಡಿದ್ದ ದೇವೇಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದಷ್ಟು ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ, ಇದೇನು ಮಕ್ಕಳಾಟವಾ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ದಿನ ಬೆಳಗಾದ್ರೆ ಶಾಸಕರನ್ನ ಸಮಾಧಾನ ಪಡಿಸುವ ಕೆಲಸವೇ ಆಗಿಹೋಗಿದೆ. ಹಾಗಾದರೆ ಸರ್ಕಾರದ ಕೆಲಸ ಮಾಡೋದು ಯಾವಾಗ? ಸರ್ಕಾರ ಉಳಿಸಿಕೊಳ್ಳೋದಕ್ಕೆ ಸಮಯ ಕಳೆಯೋದಾ? ನಿಮ್ಮ ನಿರ್ಧಾರ ಏನು ಎಂದು ತಿಳಿಸಿ ಎಂದು ದೇವೇಗೌಡ ಹೇಳಿದ್ದಾರೆ ಎನ್ನಲಾಗಿದೆ.

ಮುಂದುವರೆದ ಅವರು, ಮುಖಂಡರ ಜೊತೆ ಮಾತಾಡಿ ಸ್ಪಷ್ಟ ನಿರ್ಧಾರಕ್ಕೆ ಬನ್ನಿ ಎಂದು ಗುಂಡೂರಾವ್​ಗೆ ತಾಕೀತು ಮಾಡಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬೇಕು, ಆಗ ಮತ್ತೆ ಅಸಮಾಧಾನ ಅಂದ್ರೆ ಕಷ್ಟವಾಗತ್ತೆ. ಸರ್ಕಾರ ಸುಸೂತ್ರವಾಗಿ ನಡೆಯಬೇಕು, ಇಲ್ಲದಿದ್ದರೆ ಸರ್ಕಾರ ಇದ್ದು ಪ್ರಯೋಜನ ಏನು ಎಂದು ಪ್ರಶ್ನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದಾದ ಬಳಿಕ ಪರೋಕ್ಷವಾಗಿ ದೇವೇಗೌಡರು ಕೆಲ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು, ಅದರ ಬಗ್ಗೆ ಪಕ್ಷದ ಹೈಕಮಾಂಡ್​ ಜತೆ ಮಾತನಾಡಬೇಕು ಎಂದು ದಿನೇಶ್​ ಗುಂಡೂರಾವ್​ ತಿಳಿಸಿದರು. ಒಟ್ಟಿನಲ್ಲಿ ಒಂದೆಡೆ ಲೋಕಸಭೆ ಚುನಾವಣೆಯಲ್ಲಿ ಅಸ್ತಿತ್ವವನ್ನೇ ಮೈತ್ರಿ ಪಕ್ಷಗಳು ಕಳೆದುಕೊಂಡಿದ್ದರೆ, ಇನ್ನೊಂದೆಡೆ ಸರ್ಕಾರ ಬಿದ್ದುಹೋಗುವ ಭೀತಿಯಲ್ಲಿ ಕಾಲ ಕಳೆಯಬೇಕಾಗಿದೆ.

Comments are closed.