ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕೇವಲ ಅವರ ಹೆಸರೇ ಸಾಕಾಗಿತ್ತು. ಆದ್ರೂ ಚುನಾವಣಾ ಪ್ರಚಾರ ನಡೆಸಲು ಗುಜರಾತ್ ನಾಯಕರ ತಂಡದ ಮೇಲೆ ಅವರು ವಿಶ್ವಾಸವಿಟ್ಟಿದ್ದರು. ಇದೇ ನಾಯಕರಲ್ಲಿ ಒಬ್ಬರು ಹಿಂದೊಮ್ಮೆ ನರೇಂದ್ರ ಮೋದಿ ವಿರುದ್ಧದ ಭಿನ್ನಾಭಿಪ್ರಾಯದ ಕಾರಣ ಬಿಜೆಪಿಗೇ ಗುಡ್ಬೈ ಹೇಳಿದ್ದರು ಅನ್ನೋದು ಇಲ್ಲಿ ಇಂಟರೆಸ್ಟಿಂಗ್ ವಿಷಯ. 2007ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಈ ವೇಳೆ ಭಾವನಗರ್ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಸುನಿಲ್ ಅಹೋಜಾ ಪಕ್ಷಕ್ಕೆ ರಾಜೀನಾಮೆ ನೀಡಿ ಶಾಕ್ ನೀಡಿದ್ದರು. ಆದ್ರೆ, ಅಂದು ಯಾರು ತನ್ನನ್ನು ವಿರೋಧಿಸಿ ಬಿಜೆಪಿ ತೊರೆದಿದ್ದರೋ, ಅವರಿಗೇ ಈ ಬಾರಿ ತಮ್ಮ ಗೆಲುವಿನ ಹೊಣೆಯನ್ನು ಮೋದಿ ಹೊರಿಸಿದ್ದರು..!
ಹೌದು. ಬಿಜೆಪಿ ತ್ಯಜಿಸಿದ ನಂತರ ಸುನಿಲ್ ಅಹೋಜಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲನುಭವಿಸಿದ್ದರು. 2011ರಲ್ಲಿ ಅಹೋಜಾ ಬಿಜೆಪಿಗೆ ವಾಪಸ್ಸಾಗಿ, ಮೋದಿಯ ಅತ್ಯಾಪ್ತ ಹಾಗೂ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರಾದ್ರು. ಮೋದಿ ಹಾಗೂ ಅಮಿತ್ ಶಾ, ಅಹೋಜಾ ಅವರನ್ನ ಉತ್ತರಪ್ರದೇಶದ ಪ್ರದೇಶ ಸಹ ಉಸ್ತುವಾರಿಯನ್ನಾಗಿ ಮಾಡಿದ್ರು. ಹೀಗಾಗಿ ಅಹೋಜಾ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನ ಸೂತ್ರಧಾರಿಯಾಗಿದ್ರು.
ಸುನಿಲ್ ಅಹೋಜಾ ನೇತೃತ್ವದ ಗುಜರಾತ್ನ ತಂಡ ವಾರಣಾಸಿಯಲ್ಲಿ ಮೋದಿ ಪರ ಚುನಾವಣಾ ಪ್ರಚಾರ ನಡೆಸಿತು. ಮೋದಿ ಗೆಲ್ಲಲು ಅವರ ಹಸರೇ ಸಾಕಿತ್ತು ನಿಜ, ಆದ್ರೆ ಅವರ ಸಂಸದೀಯ ಕ್ಷೇತ್ರದಲ್ಲಿ ಸರ್ಕಾರದ ನೀತಿಗಳನ್ನ ಜನರಿಗೆ ತಲುಪಿಸುವುದು ಹಾಗೂ ಎಲೆಕ್ಷನ್ ಅಜೆಂಡಾ ಸೆಟ್ ಮಾಡಲು ಗ್ರೌಂಡ್ವರ್ಕ್ ಮಾಡುವಲ್ಲಿ ಅಹೋಜಾ ಅವರ ಪಾತ್ರ ಪ್ರಮುಖವಾದುದು. ಇವರ ಜೊತೆಗೆ ಮೋದಿಯ ಚುನಾವಣಾ ಏಜೆಂಟ್ ವಿದ್ಯಾಸಾಗರ್ ಕೂಡ ಮೋದಿಗಾಗಿ ದುಡಿದರು. ಮೋದಿ ಗೆಲುವಿನ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ರಿಂದ ಮೋದಿ ಅವರ ಪ್ರಮಾಣಪತ್ರವನ್ನೂ ಕೂಡ ವಿದ್ಯಾಸಾಗರ್ ಅವರೇ ಸ್ವೀಕರಿಸಿದ್ರು. ಬಳಿಕ ನಾಯಕರ ಜೊತೆಗೂಡಿ ಪ್ರಮಾಣಪತ್ರವನ್ನು ನವದೆಹಲಿಗೆ ತೆಗದುಕೊಂಡು ಹೋಗಿ ಮೋದಿಗೆ ಹಸ್ತಾಂತರಿಸಿದರು. ಇನ್ನು ಎಂಎಲ್ಸಿ ಲಕ್ಷ್ಮಣ್ ಆಚಾರ್ಯ, ಸಚಿವ ನೀಲಕಂಠ್ ತಿವಾರಿ ಕೂಡ ವಾರಣಾಸಿಯಲ್ಲಿ ಮೋದಿಗಾಗಿ ದುಡಿದಿದ್ದಾರೆ.
ಈ ಬಗ್ಗೆ ಮಾತನಾಡಿರೋ ಅಹೋಜಾ, ವಾರಣಾಸಿಯಲ್ಲಿ ಮೋದಿ ಗೆಲ್ಲುವಲ್ಲಿ ನನ್ನ ಪಾತ್ರವೇನೂ ಇಲ್ಲ, ನಾನು ಸೂತ್ರಧಾರನೂ ಅಲ್ಲ. ಮೋದಿಯ ಹೆಸರು ಕೇಳಿಯೇ ಜನ ವೋಟ್ ಹಾಕ್ತಾರೆ. ನಾನು ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತ ಅಂತಾರೆ.