ಬೆಳಗಾವಿ: ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಮನವೊಲಿಸುವ ಪ್ರಯತ್ನ ಈಗಿಲ್ಲ ಎಂದು ಸಚಿವ, ಸಹೋದರ ಸತೀಶ್ ಜಾರಕಿಹೊಳಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾತನಾಡಿದ ಅವರು, ಮೊನ್ನೆ ಸಚಿವ ಸಂಪುಟದಲ್ಲಿ ಬಹಳಷ್ಟು ಜನರು ಸರ್ಕಾರ ಉಳಿಸಲು ಸಚಿವ ಸ್ಥಾನ ಬಿಟ್ಟು ಕೊಡಲು ಮುಂದೆ ಬಂದಿದ್ದಾರೆ. ಇನ್ನೂ ಯಾರನ್ನ ಸಂಪುಟದಿಂದ ಕೈ ಬಿಡಬೇಕು ಅನ್ನೋದು ತೀರ್ಮಾನ ಆಗಿಲ್ಲ ಎಂದರು.
ಸದ್ಯ ಮೂವರು ಅತೃಪ್ತರಿಗೆ ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆ. ಯಾರು ಆ ಮೂವರು ಅನ್ನೋದು ಗೊತ್ತಾಗಿಲ್ಲ, ಅದು ಪಕ್ಷದ ವರಿಷ್ಠರು ತೀರ್ಮಾನ ತಗೋತಾರೆ. ನಮ್ಮ ಪಕ್ಷದಿಂದ ಸರ್ಕಾರ ಉಳಿಸಲು ಕೆಲ ಸಚಿವರನ್ನ ಕೈ ಬಿಡುವ ಕಾರ್ಯ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಎಷ್ಟು ಜನರು ರಾಜೀನಾಮೆ ಕೊಡ್ತಾರೆ ಅನ್ನೋದು ಸ್ಪಷ್ಟವಾಗಿಲ್ಲ, ಆದರೆ, ಈಗಾಗಲೇ ಕೆಲವರು ಮುಂದೆ ಬಂದಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ರಾಜಕಾರಣ ಬರಲು ಮುಕ್ತವಾಗಿದೆ ಎಂದು ಅವರು ಹೇಳಿದರು.
ಸಹೋದರ ರಮೇಶ್ ಜಾರಕಿಹೊಳಿ ಎಸ್.ಎಂ ಕೃಷ್ಣಾ ಭೇಟಿ ಬಗ್ಗೆ ಏನು ಹೇಳುವುದಿಲ್ಲ, ಅವರ ಮನವೊಲಿಸುವ ವಿಚಾರ ಮುಗಿದು ಹೋದ ಅಧ್ಯಾಯ. ಮೂರು ತಿಂಗಳು ಹಿಂದೆ ಅವರ ಮನವೊಲಿಸುವ ಪ್ರಯತ್ನವಾಗಿದೆ. ಈಗ ನಾನು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ನುಡಿದರು.
ಅಲ್ಲದೇ ಬಿಜೆಪಿ ರಣತಂತ್ರ ಏನಿದೆ ಅನ್ನೋದನ್ನ ಕಾದು ನೋಡೋಣಾ. ಅನಿವಾರ್ಯವಾಗಿ ಸಾರ್ವತ್ರಿಕ ಚುನಾವಣೆ ಎದುರಾದ್ರೆ ನಾವು ರೆಡಿ ಆಗಲೇಬೇಕು. ಆಗ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೆವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.