ರಾಮನಗರ: ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿಎಂ ಲಿಂಗಪ್ಪ, ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಿಂಗಪ್ಪ, ಸ್ವತಂತ್ರ ಬಂದ ನಂತರ ರಾಜ್ಯದಲ್ಲಿ ಇದೇ ಮೊದಲು ಕಾಂಗ್ರೆಸ್ಗೆ ಈ ಸ್ಥಿತಿ ಬಂದಿದೆ. ಈಗಲಾದರೂ ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕು. ಮೈತ್ರಿ ಬೇಕೆ, ಸಾಕೇ ಎಂದು ತೀರ್ಮಾನ ಮಾಡಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಕೆಲವರಿಗೆ ಅಧಿಕಾರ ಬಂದಾಗ ತಗ್ಗಿ ಬಗ್ಗಿ ನಡೆಯಬೇಕು. ಅಧಿಕಾರ, ಅಂತಸ್ತು, ಐಶ್ವರ್ಯ ಬಂದಾಗ ತಲೆಬಾಗಿ ನಡೆಯಬೇಕು. ಆಕಸ್ಮಿಕವಾಗಿ ಅಧಿಕಾರ ಸಿಕ್ಕಾಗ ಉಳಿಸಿಕೊಳ್ಳಬೇಕು. ಆದರೆ ಅಧಿಕಾರದಲ್ಲಿದ್ದಾಗ ತಲೆ ಎತ್ತಿ ನಡೆದರೆ ಈ ಪರಿಸ್ಥಿತಿ ಬರುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೇ, ನಾನು ಮಂಡ್ಯದಲ್ಲಿದ್ದಿದ್ದರೆ ನಾನು ಸುಮಲತಾಗೆ ಮತ ಹಾಕುತ್ತಿದೆ. ಮಂಡ್ಯದಲ್ಲಿ ಸ್ವಾಭಿಮಾನ ಜಯಗಳಿಸಿದೆ. ನಾನು ಅವರ ಗೆಲುವನ್ನ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಹೆಸರು ಹೇಳದೇನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿ ಎಂದು ಸಿಎಂ ಲಿಂಗಪ್ಪ ಹೇಳಿದ್ದಾರೆ. 77 + 38 ಒಂದಾಗೋದಾದರೇ, 104 + ಇನ್ನೇನೋ ಆಗಲಿ ಬಿಡಿ ಎಂದು ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮುಂದೆ ಮೈತ್ರಿ ಧರ್ಮ ಮುಂದುವರೆದರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂದು ಸಿಎಂ ಲಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.