ಗುವಾಹಟಿ: ನಾಗಾಲೆಂಡ್ನಲ್ಲಿ ಭದ್ರತಾ ಪಡೆಗಳ ಮೇಲೆ ನಾಗಾ ಉಗ್ರರ ಸಂಘಟನೆಯೊಂದು ದಾಳಿ ನಡೆಸಿ ಇಬ್ಬರು ಯೋಧರನ್ನು ಬಲಿತೆಗೆದುಕೊಂಡಿದೆ. ಎನ್ಎಸ್ಸಿಎನ್-ಕೆ ಸಂಘಟನೆಯ ಉಗ್ರರು ಮೋನ್ ಜಿಲ್ಲೆಯಲ್ಲಿ ಅಸ್ಸಾಮ್ ರೈಫಲ್ಸ್ ಪಡೆಯ ಬೆಂಗಾವಲು ವಾಹನಗಳ ಮೇಲೆ ಆಕ್ರಮಣ ನಡೆಸಿದರು. ಈ ಘಟನೆಯಲ್ಲಿ ಇಬ್ಬರು ಸತ್ತರೆ, ಮೂವರು ಯೋಧರಿಗೆ ಗಾಯಗಳಾಗಿವೆ.
ಯುಂಗ್ ಆಂಗ್ ನೇತೃತ್ವದ ರಾಷ್ಟ್ರೀಯ ನಾಗಾಲೆಂಡ್-ಖಪ್ಲಂಗ್ ಸೋಷಿಯಲಿಸ್ಟ್ ಕೌನ್ಸಿಲ್ ಸಂಘಟನೆಯ ಸದಸ್ಯರು ಮೋನ್ ಜಿಲ್ಲೆಯ ತೋಬು ಮತ್ತು ಉಖಾ ಗ್ರಾಮದ ಬಳಿ ಮಧ್ಯಾಹ್ನ 1ಗಂಟೆಗೆ ದಾಳಿ ಎಸಗಿರುವುದು ತಿಳಿದುಬಂದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಘರ್ಷಣೆ ಶುರುವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಉಗ್ರರನ್ನು ಬೆನ್ನಟ್ಟುವ ಕೆಲಸ ಮಾಡಿದರು.
ತಮ್ಮ ಕಡೆಯ ಸೈನಿಕರೇ ಈ ದಾಳಿ ಎಸಗಿದ್ದಾಗಿ ಎನ್ಎಸ್ಸಿಎನ್(ಕೆ) ಸಂಘಟನೆಯೇ ಹೊಣೆ ಹೊತ್ತುಕೊಂಡಿದೆ. ಈ ಗುಂಡಿನ ಚಕಮಕಿಯಲ್ಲಿ ಉಗ್ರರಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ.
ಕಳೆದ ವರ್ಷ ಇದೇ ತಿಂಗಳಲ್ಲಿ ಭಾರತ ಮತ್ತು ಮಯನ್ಮಾರ್ ಗಡಿಭಾಗದಲ್ಲಿ ಭಾರತೀಯ ಸೇನೆಯ ನೆರವಿನಿಂದ ಮಯನ್ಮಾರ್ ಸೇನೆಯು ಎನ್ಎಸ್ಸಿಎನ್(ಕೆ) ಸಂಘಟನೆಯ ಮೂರನೇ ಬೆಟಾಲಿಯನ್ ಮೇಲೆ ಕಾರ್ಯಾಚರಣೆ ನಡೆಸಿ ಅನೇಕರನ್ನು ಕೊಂದಿದ್ದರು. ಆ ಘಟನೆಗೆ ನಾಗಾ ಉಗ್ರರು ಈಗ ಪ್ರತೀಕಾರ ತೀರಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ.