ಕರ್ನಾಟಕ

‘ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಮುಗಿದ ಕಥೆ’; ಬಿಜೆಪಿ ಸಂಸದ ಉಮೇಶ್ ಜಾಧವ್​

Pinterest LinkedIn Tumblr


ಬೆಂಗಳೂರು,(ಮೇ 24): ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ನೂತನ ಸಂಸದ ಜಾಧವ್​​ ಇಂದು ಬೆಂಗಳೂರಿಗೆ ಆಗಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಬಿಎಸ್​ವೈ ಭೇಟಿ ಬಳಿಕ ಉಮೇಶ್​ ಜಾಧವ್​ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆ ಮುಗಿದ ಕಥೆ, ಆ ಬಗ್ಗೆ ಮಾತನಾಡಬಾರದು. ಸೋಲಿಲ್ಲದ ಸರದಾರ 11 ಸಲ ಗೆದ್ದವರು ಮಲ್ಲಿಕಾರ್ಜು ಖರ್ಗೆ. ಯಡಿಯೂರಪ್ಪನವರು ನನ್ನ ಮೇಲೆ ಭರವಸೆ ಇಟ್ಟು ಕಲಬುರಗಿಯಿಂದ ಸ್ಪರ್ಧಿಸುವ ಅವಕಾಶ ಕೊಟ್ಟರು. ಅದರಂತೆಯೇ ನಾನು ಬಿಎಸ್​ವೈ ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆದ್ದಿದ್ದೇನೆ. ಈ ಚುನಾವಣೆಯಲ್ಲಿ ಗೆದ್ದಿದ್ದು ನನಗೆ ಖುಷಿ ಇದೆ. ಕಲಬುರಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ” ಎಂದು ಹೇಳಿದರು.

ಇನ್ನು, ಮೈತ್ರಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಉಮೇಶ್​ ಜಾಧವ್​, “ನಾವು ಮೈತ್ರಿ ಸರ್ಕಾರವನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಕಾಂಗ್ರೆಸ್​, ಜೆಡಿಎಸ್​​ ಮೈತ್ರಿ ಸರ್ಕಾರದಿಂದ ಯಾವುದೇ ಕೆಲಸ ಆಗುತ್ತಿಲ್ಲ. ಬರುವ ಅನುದಾನ ನಿಂತು ಹೋಗಿದ್ದವು. ಹೀಗಾಗಿ ರಾಜೀನಾಮೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದೆ. ಸಿಎಂ ಕುಮಾರಸ್ವಾಮಿ ಇಂದು ಸಂಜೆ ರಾಜೀನಾಮೆ ನೀಡಲಿ. ಅವರು ರಾಜೀನಾಮೆ ಜನರಿಗೆ ಒಳ್ಳೆಯ ಸಂದೇಶಹೋಗುತ್ತದೆ. ಎಚ್​ಡಿಕೆ ಇಂದು ಸಂಜೆಯೇ ರಾಜೀನಾಮೆ ನೀಡುವ ಭರವಸೆ ನನಗಿದೆ” ಎಂದರು.

ಫಲಿತಾಂಶದ ಬಳಿಕ ಕಾಂಗ್ರೆಸ್ ರೆಬೆಲ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾಧವ್, “ಎಲ್ಲರೂ ನಮ್ಮ ಸ್ನೇಹಿತರು, ಅವರೂ ಬರುವ ಅವಕಾಶ ಇದೆ. ಮೈತ್ರಿ ಸರ್ಕಾರ ಬೀಳಿಸುವುದು ಬೇಡ‌, ಅದೇ ಬೀಳುತ್ತದೆ” ಎಂದು ವ್ಯಂಗ್ಯ ಮಾಡಿದರು.

ಇದೇ ವೇಳೆ, ಉಮೇಶ್​ ಜಾಧವ್​ ತನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಆಸೆಯಿಲ್ಲ ಎಂಬುದನ್ನು ಹೇಳಿದರು. ” ಕೇಂದ್ರದಲ್ಲಿ ಸಚಿವ ಸ್ಥಾನದ ಅಪೇಕ್ಷೆ ನನಗಿಲ್ಲ. ಆದರೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

Comments are closed.