ಕರ್ನಾಟಕ

ಕಾಂಗ್ರೆಸ್ ಭದ್ರಕೋಟೆ ಕಲ್ಬುರ್ಗಿಯಲ್ಲಿ ‘ಕಮಲ’ ಅರಳಿದ್ದು ಹೇಗೆ?

Pinterest LinkedIn Tumblr


ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗಿದೆ. ಮೋದಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷ ಕೊಚ್ಚಿ ಹೋಗಿದೆ. ಘಟಾನುಘಟಿ ನಾಯಕರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಅದರಲ್ಲಿ ಸೋಲಿಲ್ಲದ ಸರದಾರ, ಧೀಮಂತ ನಾಯಕ, ಹಿರಿಯ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗ ಸಹ ಒಬ್ಬರು.

ಹೌದು, ಮಲ್ಲಿಕಾರ್ಜುನ ಖರ್ಗೆರವರು ಸಂಸದರಾಗಿ ಮಾಡಿದ ಅಭಿವೃದ್ಧಿ ಕೆಲಸ ಬೇರೆ ಯಾವ ಸಂಸದರು ಮಾಡಿಲ್ಲ ಎಂಬುದಕ್ಕೆ ಎರಡು ಮಾತಿಲ್ಲ. ಇದನ್ನು ಜನರು ಸಹ ಒಪ್ತಾರೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿಲ್ಲ. ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ರಾಜಕೀಯ ಭವಿಷ್ಯಕ್ಕಾಗಿ ಇತರ ಕಾಂಗ್ರೆಸ್ ನಾಯಕರನ್ನು ತುಳೀತಿದಾರೆ ಅಂತಾ ಕಾಂಗ್ರೆಸ್ ನಾಯಕರೇ ಆರೋಪಿಸಿದ್ದರು. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡಿದ್ದ ಬಿಜೆಪಿ ಕಾಂಗ್ರೆಸ್ ನಲ್ಲಿಯೇ ಇದ್ದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ರನ್ನು ಕಮಲ ಪಾಳಯಕ್ಕೆ ಸೇರಿಸಿಕೊಂಡಿತ್ತು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಕಾ ಪ್ಲ್ಯಾನ್ ರೂಪಿಸಿದ್ದ ಕೇಸರಿ ಬ್ರಿಗೇಡ್ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ರನ್ನು ಪಕ್ಷಕ್ಕೆ ಕರೆತಂದು ಕಣಕ್ಕೀಳಿಸಿತು. 2014ರಲ್ಲಿ ನಡೆದಿದ್ದ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅತ್ಯಂತ ಸರಳವಾಗಿತ್ತು.. ಕಾರಣ ಅವರು ಕೇಂದ್ರ ಸಚಿವರಾಗಿದ್ದಾಗ ಕಲ್ಬುರ್ಗಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ರು.‌ಕಲ್ಬುರ್ಗಿ ಜನ ಸುಲಭವಾಗಿ ಮರೆಯಲಾಗದ ಕೇಂದ್ರೀಯ ವಿವಿ, ಇ.ಎಸ್.ಐ. ಆಸ್ಪತ್ರೆ ಕಟ್ಟಡ, ರೈಲ್ವೆ ಯೋಜ‌ನೆಗಳು ಮತ್ತು ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 ಕಲಂ ತಿದ್ದುಪಡಿ ಇಂತಹ ಹಲವು ಯೋಜನೆಗಳು ಖರ್ಗೆ ಪಾಲಿಗೆ ಈ ಹಿಂದಿನ ಚುನಾವಣೆಯಲ್ಲಿ ದೊಡ್ಡ ವರ ಆಗಿದ್ದವು. ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಂತಹ ಅನುಕೂಲ ಇಲ್ಲ. ಇದು ಖರ್ಗೆ ಅವರ ಪಾಲಿಗೆ ಮೊದಲ ದೊಡ್ಡ ಹಿನ್ನಡೆ ಎನ್ನಬಹುದು.

ಇನ್ನು ಕಾಂಗ್ರೆಸ್ ಪ್ರಭಾವಿ ನಾಯಕರಾಗಿದ್ದ ಮಾಜಿ ಸಿಎಂ. ಧರ್ಮಸಿಂಗ್ ಮತ್ತು ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಅಗಲಿಕೆಯೂ ದೊಡ್ಡ ಪೆಟ್ಟು‌‌‌ ನೀಡಿದೆ.‌ ಇನ್ನು ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್, ಕಾಂಗ್ರೆಸ್ ನಿಂದ ಹೊರಬಂದು ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿ ತೊಡೆತಟ್ಟಿ ನಿಂತಿರುವುದು ಖರ್ಗೆ ಅವರಿಗೆ ದೊಡ್ಡ ಹೊಡೆತವಾಯಿತು. ಲಂಬಾಣಿ ಸಮುದಾಯದವರಾದ ಉಮೇಶ ಜಾಧವ್ ಸ್ಪರ್ದೆಯಿಂದ ಲಂಬಾಣಿ ಮತಗಳು ಒಗ್ಗಟ್ಟಾಗಿ ಜಾಧವ್ ಪರ ತಿರುಗಿದ್ದು ಬಿಜೆಪಿ ಗೆಲುವಿಗೆ ಕಾರಣ. ಅಷ್ಟೇ ಅಲ್ಲದೇ ಕೋಲಿ ಕಬ್ಬಲಿಗ ಸಮಾಜದ ಮತಗಳ ಮೇಲೆ ಪ್ರಬಲ ಹಿಡಿತ ಹೊಂದಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದ ಮಾಲೀಕಯ್ಯ ಗುತ್ತೇದಾರ, ಡಾ. ಎ.ಬಿ ಮಾಲಕರೆಡ್ಡಿ ಅವರು ಈ ಬಾರಿ ಎದುರಾಳಿ ಬಿಜೆಪಿ ಪಾಳೆಯ ಸೇರಿದ್ರು.

ಪುತ್ರ ಪ್ರಿಯಾಂಕ್ ಖರ್ಗೆಗೆ ಸಚಿವ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ಮಡುವು ಗಟ್ಟಿತ್ತು. ಖರ್ಗೆ ಅವರ ಪುತ್ರ ಪ್ರೇಮ ಅವರಿಗೇ ಮುಳುವಾಯಿತು ಅಂದ್ರೂ ಅತಿಶಯೋಕ್ತಿ ಅಲ್ಲ‌. ಬೀದರ್ ಲೋಕಸಭಾ ಕ್ಷೇತ್ರದ ಟಿಕೇಟ್ ಪಡೆಯಲು ಧರ್ಮಸಿಂಗ್ ಕುಟುಂಬದವರು ಸಾಕಷ್ಟು ಪ್ರಯತ್ನ ನಡೆಸಿದ್ರು. ಇದು ಕೈ ತಪ್ಪಲು ಖರ್ಗೆ ಕಾರಣ ಎನ್ನುವ ನೋವು ಹಾಗೂ ಮಂತ್ರಿ ಮಾಡದಿರುವ ಅಸಮಾಧಾನ ಜೇವರ್ಗಿ ಕೈ ಶಾಸಕ ಡಾ. ಅಜಯಸಿಂಗ್ ಬೆಂಬಲಿಗರಲ್ಲಿ ಕಾಡುತ್ತಿತ್ತು.. ಇದು ಜೇವರ್ಗಿಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆಗೆ ಕಾರಣವಾಯಿತು.

ಇನ್ನು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇನ್ನಿತರರು ಕಲ್ಬರ್ಗಿ ಲೋಕಸಭಾ ಕ್ಷೇತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಟೊಂಕ ಕಟ್ಟಿ ತೆರೆ ಮರೆಯಲ್ಲಿ ಕೆಲಸ ಮಾಡಿದ್ರು. 9 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸತತ ಗೆಲುವುಗಳೇ ಈ ಬಾರಿ ಹಿನ್ನಡೆಗೆ ಕಾರಣ ವಾಗಬಹುದು.. ಜನ ನಿರಂತರವಾಗಿ ಹನ್ನೊಂದು ಬಾರಿ ಗೆಲ್ಲಿಸಿದರು ಖರ್ಗೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಅಪಪ್ರಚಾರ ಈ ಬಾರಿ ಜನ ಚೇಂಜ್ ಬಯಸಲು ಕಾರಣವಾಯಿತು.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲಾದ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ನಾವು ನೀರಿಕ್ಷೆ ಮಾಡಿದಷ್ಟು ಮತಗಳು ನಮಗೆ ಬಂದಿಲ್ಲ. ಜನರು ನೀಡಿದ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದಿದ್ದಾರೆ. ಅಲ್ಲದೇ ಮುಂದೆ ಪಕ್ಷವನ್ನು ಬಲಪಡಿಸಲು ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಚರ್ಚಿಸಲಾಗುತ್ತೆ ಅಂತಾ ತಿಳಿಸಿದ್ದಾರೆ. ಅದೇನೇ ಇರಲಿ, ಮೋದಿ ಅಲೆಯಲ್ಲಿ ಘಟಾನುಘಟಿ ನಾಯಕರೇ ಸೋಲನುಭವಿಸಿದ್ದಾರೆ. ಆದ್ರೆ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಸೋಲು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಗೂ ದೊಡ್ಡ ಪೆಟ್ಟು ತಂದಿದೆ. ಕಲಬುರಗಿಯಲ್ಲಿ ಮತ್ತೆ ಕೈ ಬಲಪಡಿಸಲು ಯಾವೆಲ್ಲಾ ರಣತಂತ್ರ ರೂಪಿಸಲಾಗುತ್ತೆ ಎಂಬುದನ್ನು ಕಾದು ನೋಡಬೇಕು.

Comments are closed.