ಕರ್ನಾಟಕ

ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರುತ್ತೀರಾ ಎಂಬ ಪ್ರಶ್ನೆಗೆ ಸುಮಲತಾ ಹೇಳಿದ್ದೇನು?

Pinterest LinkedIn Tumblr


ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಇಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಷ್ ಮಾಧ್ಯಮದ ಜೊತೆ ಮಾತನಡಿದ್ದು, ಗೆಲುವಿನ ಖುಷಿ ಹಂಚಿಕೊಂಡಿದ್ದಾರೆ.

ಮಂಡ್ಯ ಜನತೆಗೆ ಧನ್ಯವಾದ ಸಲ್ಲಿಸಿದ ಸುಮಲತಾ, ಮಂಡ್ಯದ ಜನರು ಪ್ರೀತಿಗೆ ಬೆಲೆ ಕೊಡ್ತಾರೆ. ಆ ಸ್ವಾಭಿಮಾನ ಅನ್ನೋದು ಮತ್ತೆಲ್ಲೂ ಸಿಗಲ್ಲ.ನಾನು ಮಂಡ್ಯದ ಎಂಪಿ ಅಂತಾ ಹೇಳಿಕೊಳ್ಳೋಕ್ಕೆ ನನಗೆ ಹೆಮ್ಮೆಯಾಗತ್ತೆ. ಮಂಡ್ಯ ಜನರಿಗೆ ಧನ್ಯವಾದ ಹೇಳೋಕ್ಕೆ ನನ್ನ ಬಳಿ ಪದಗಳಿಲ್ಲ. ಈ ಜನರ ಋಣವನ್ನ ಜೀವನಪೂರ್ತಿ ಮಂಡ್ಯದ ಪರ ನಿಂತು ತೀರಿಸಬೇಕೆಂದು ಆಸೆ ಇದೆ ಎಂದು ಹೇಳಿದ್ದಾರೆ.

ಅಲ್ಲದೇ, ಜನರು ನಮ್ಮನ್ನು ಗೆಲ್ಲಿಸಿದ್ದಾರೆಂದರೆ ನಾವು ಅಧಿಪತಿಯಲ್ಲ. ನಮಗೆ ಅವರ ಸೇವೆ ಮಾಡೋದಕ್ಕೆ ಅವಕಾಶ ಕೊಟ್ಟಿದ್ದಾರೆಂದರೆ ನಾವು ಅವರ ಸೇವೆ ಮಾಡಬೇಕು.ನನ್ನ ಗೆಲುವಷ್ಟೇ ಇತಿಹಾಸವಲ್ಲ. ಈ ಬಾರಿಯ ಮಂಡ್ಯ ಎಲೆಕ್ಷನ್ ಇತಿಹಾಸ. ಬಿಜೆಪಿ- ಕಾಂಗ್ರೆಸ್ ಇಬ್ಬರು ಸೇರಿ ನನಗೆ ಸಪೋರ್ಟ್ ಮಾಡಿದ್ದಾರೆ. ಎರಡೂ ಬಾವುಟ ಮಂಡ್ಯದಲ್ಲಿ ಒಬ್ಬ ಅಭ್ಯರ್ಥಿಗಾಗಿ ಹಾರಾಡಿದೆ ಎಂದ ಮೇಲೆ ಇದು ಇತಿಹಾಸವೇ ಎಂದು ಸುಮಲತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿಗೆ ಅಥವಾ ಮತ್ತೆ ಕಾಂಗ್ರೆಸ್‌ಗೆ ಹೋಗುವ ಪರಿಸ್ಥಿತಿ ಬಂದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದು, ಮಂಡ್ಯ ಜನರ ಅಭಿಪ್ರಾಯ ಕೇಳಿ. ನನಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾದಲ್ಲಿ ನಾನು ಮಂಡ್ಯ ಜನರನ್ನೇ ಕೇಳುತ್ತೇನೆಂದು ಹೇಳಿದ್ದಾರೆ.

ಇನ್ನು ನಟನೆ ಬಗ್ಗೆ ಮಾತನಾಡಿದ ಸುಮಲತಾ ಸದ್ಯಕ್ಕೆ ನಾನು ನಟನೆ ಬಗ್ಗೆ ಯೋಚನೆ ಮಾಡಿಲ್ಲ. ನನಗೀಗ ಮಂಡ್ಯ ಜನತೆ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನ ನಿಭಾಯಿಸಬೇಕು. ಸದ್ಯಕ್ಕೆ ಮಂಡ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಸ್ವಂತ ಮನೆ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ.

ರಾಜಕೀಯ ಪ್ರಚಾರದಲ್ಲಿ ಆದ ಅನುಭವದ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್, ಪಾಲಿಟಿಕ್ಸ್‌ನಲ್ಲಿ ಹೇಗೆ ಆಟ ಆಡ್ತಾರೆ. ಎಲ್ಲಿ ಹೇಗಿರಬೇಕೆಂದು ತಿಳಿದುಕೊಂಡಿದ್ದೇನೆ. ಸಾಕಷ್ಟು ಆಟಗಳನ್ನು ನೋಡಿದ್ದೇನೆ. ರಾಜಕೀಯ ಪ್ರಚಾರದಲ್ಲಿ ಏನೆಲ್ಲಾ ಆಗಬಾರದೋ, ಅಂಥಾ ಅನುಭವವೆಲ್ಲ ಆಗಿದೆ. ಇದರಿಂದ ಯಾವ ಥರ ಇರಬಾರದು ಅನ್ನೋ ಪಾಠ ಮಾತ್ರ ಕಲಿತಿದ್ದೀನಿ. ನೆಗೆಟಿವ್ ಪಾಲಿಟಿಕ್ಸ್‌ನ್ನ ಫಸ್ಟ್‌ ಎಲೆಕ್ಷನ್‌ನಲ್ಲೇ ನೋಡಿದ್ದೇನೆ. ಆದ್ದರಿಂದ ಇನ್ಮುಂದೆ ಗಟ್ಟಿಯಾಗುತ್ತೇನೆ ಎಂದು ಹೇಳಿದ್ದಾರೆ.

Comments are closed.