ಬೆಂಗಳೂರು: ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ತುಮಕೂರಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು ವಿರುದ್ಧ ಪರಾಭವಗೊಂಡಿದ್ದಾರೆ. ಇನ್ನೇನು ಅಧಿಕೃತವಾಗಿ ಕೇಂದ್ರ ಚುನಾವಣಾ ಆಯೋಗ ಘೋಷಿಸಬೇಕಿದೆ.
ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜ್ ವಿರುದ್ಧ ದೇವೇಗೌಡರು 27 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಮತ ಎಣಿಕೆ ಪ್ರಾರಂಭದಲ್ಲಿ ದೇವೇಗೌಡರು ಮುನ್ನಡೆ ಕಾಯ್ದುಕೊಂಡಿದ್ದರು. 7ನೇ ಸುತ್ತಿನ ಬಳಿಕ ಮತ ಎಣಿಕೆ ವೇಳೆಗೆ ತೀವ್ರ ಹಿನ್ನಡೆಯನ್ನು ಮಾಜಿ ಪ್ರಧಾನಿಗಳು ಅನುಭವಿಸಬೇಕಾಯ್ತು.
ದೊಡ್ಡ ಗೌಡರ ಪಾಲಿಗೆ ಮೂಲತಃ ಹಾಸನ ತವರು ಕ್ಷೇತ್ರ. ಕಳೆದ ಮೂರು ದಶಕಗಳಿಂದ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ದೇವೇಗೌಡ ಸಾಮಾನ್ಯವಾಗಿ ಎಲ್ಲಾ ಚುನಾವಣೆಯಲ್ಲೂ ಕನಿಷ್ಟ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ, ಮೊಮ್ಮಗನ ರಾಜಕೀಯ ಏಳಿಗೆಗಾಗಿ ಕ್ಷೇತ್ರ ಬಿಟ್ಟು ಕೊಟ್ಟಿರುವ ಅವರು ತುಮಕೂರಿನಿಂದ ಸ್ಪರ್ಧಿಸಿದ್ದರು.
ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸಿಗರ ವಿರೋಧದ ಸೂಚನೆಯೊಂದಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದರೆ, ಅವರ ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಅದೃಷ್ಟ ಪರೀಕ್ಷೆಗಿಳಿದು ಗೆದ್ದಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಗೌಡ ಪರಿವಾರವೇ ಇರುವುದು ಎಲ್ಲರ ಕುತೂಹಲಕ್ಕೆ ಪ್ರಮುಖ ಕಾರಣವಾಗಿತ್ತು.
ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧಿಸಿದ್ದ ಹೆಚ್ ಡಿ ದೇವೇಗೌಡ, ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ವಿರೋಧಕ್ಕೂ ಗುರಿಯಾಗಿದ್ದರು. 2014ರಲ್ಲಿ ಸಂಸದರಾಗಿ ಆಯ್ಕೆಗೊಂಡಿದ್ದ ಕಾಂಗ್ರೆಸ್ ನ ಮುದ್ದ ಹನುಮೇಗೌಡ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆಎನ್ ರಾಜಣ್ಣ ದೇವೇಗೌಡರ ಸ್ಪರ್ಧೆಗೆ ವಿರೋಧ ಕೂಡ ವ್ಯಕ್ತಪಡಿಸಿದ್ದರು.
ಸದ್ಯ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ವಿರುದ್ಧ ಹೀನಾಯವಾಗಿ ಸೋತಿದ್ದಾರೆ. ತುಮಕೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ವರಿಷ್ಠ, ಸುಮಾರು 17 ಸಾವಿರ ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ. ಜೆಡಿಎಸ್‌ನ ಹೆಚ್.ಡಿ.ದೇವೇಗೌಡರಿಗೆ 405314 ಮತಗಳು, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 429139 ಲಭ್ಯವಾಗಿದೆ.ಕಾಂಗ್ರೆಸ್-ಜೆಡಿಎಸ್ ಪಕ್ಷದೊಳಗಿನ ಭಿನ್ನಮತವನ್ನು ಸದುಪಯೋಗ ಪಡಿಸಿಕೊಂಡು ಈ ಬಾರಿ ಗೆಲುವಿನ ನಗೆ ಬೀರುವುದು ಜಿ.ಎಸ್. ಬಸವರಾಜ್ ಉದ್ದೇಶವಾಗಿತ್ತು. ಆದರೆ, ಅವರ ದುರಾದೃಷ್ಟಕ್ಕೆ ಚುನಾವಣೆ ಕೊನೆಯ ಹಂತದ ಸಿದ್ದತೆ ನಡೆಯುಯುವ ಹೊತ್ತಿಗೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಅನಿರೀಕ್ಷಿತವಾಗಿ ಒಂದಾಗಿದ್ದರು. ಎರಡೂ ಪಕ್ಷ ನಾಯಕರ ತೀರ್ಮಾನಕ್ಕೆ ತಲೆಬಾಗಿದ ಕಾರ್ಯಕರ್ತರು ದೇವೇಗೌಡರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎನ್ನಲಾಗಿತ್ತು. ಇದೀಗ ಲೆಕ್ಕಚಾರ ಬದಲಾಗಿದ್ದು, ದೇವೇಗೌಡರು ಹೀನಯವಾಗಿ ಸೋತಿದ್ದಾರೆ.