ಕರ್ನಾಟಕ

ತನಗೆ ತಾನೆ ಗುಂಡಿ ತೋಡಿಕೊಂಡ ಜೆಡಿಎಸ್

Pinterest LinkedIn Tumblr


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿವೆ ಎಂದೇ ಬಣ್ಣಿಸಲಾಗಿತ್ತು. ಆದರೆ, ಮೈತ್ರಿ ಪಕ್ಷಗಳ ಎಲ್ಲಾ ಊಹೆಗಳು ಉಲ್ಟಾ ಹೊಡೆದಿದ್ದು ಚುನಾವಣೋತ್ತರ ಸಮೀಕ್ಷೆಗಳು ಕೊನೆಗೂ ನಿಜವಾಗಿದೆ.

ರಾಜ್ಯದ ಅಭಿವೃದ್ಧಿ ದೃಷ್ಟಿಕೋನದಲ್ಲಿ ಎರಡೂ ಪಕ್ಷಗಳ ನಡುವೆ ತಾಳಮೇಳ ಹೊಂದಾಣಿಕೆಯಾಗದ ಪರಿಣಾಮ ಏನು ಎಂಬುದು? ಇಂದಿನ ಲೋಕಸಭೆ ಫಲಿತಾಂಶ ಸಾರಿ ಹೇಳುತ್ತಿದೆ. ರಾಜ್ಯ ಚುನಾವಣಾ ಫಲಿತಾಂಶಗಳ ಇತಿಹಾಸದ ಮಟ್ಟಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಪಾಲಿನ ಅತ್ಯಂತ ಕೆಟ್ಟ ಸಾಧನೆ ಇದು ಎಂದು ಬಣ್ಣಿಸಲಾಗುತ್ತದೆ.

ಕಳೆದ ಚುನಾವಣೆಗಳಲ್ಲಿ 09 ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ 2 ಸ್ಥಾನಕ್ಕೆ ಕುಸಿದಿದೆ. ಆದರೆ, ರಾಷ್ಟ್ರೀಯ ಪಕ್ಷವಾಗಿ ಭವಿಷ್ಯದಲ್ಲಿ ಚೇತರಿಸಿಕೊಳ್ಳಲು ಕಾಂಗ್ರೆಸ್​ ಪಕ್ಷಕ್ಕೊಂದು ಅವಕಾಶವಿದೆ. ಆದರೆ, ಸ್ವತಃ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರೇ ಸೋಲಿನ ಕಹಿ ಉಂಡಿರುವುದು ಜೆಡಿಎಸ್ ಪಕ್ಷದ ಭವಿಷ್ಯದ ಕುರಿತು ಚಿಂತಿಸುವಂತೆ ಮಾಡಿದೆ.

ಅಸಲಿಗೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್​ ಅಧಿಕ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ, ನಾಯಕರು ತಳೆದ ಕೆಲವು ತಪ್ಪು ನಿರ್ಣಯಗಳು ಇಂದು ದೊಡ್ಡ ಮಟ್ಟದ ಸೋಲಿಗೆ ಕಾರಣವಾಗಿದೆ. ಹಾಗಾದರೆ ಜೆಡಿಎಸ್ ಪಕ್ಷದ ಸೋಲಿಗೆ ಕಾರಣವೇನು..? ಪಕ್ಷದ ಮುಂದಿರುವ ಪ್ರಶ್ನೆಗಳೇನು ಇಲ್ಲಿದೆ ಡೀಟೈಲ್.!

ಮೊಮ್ಮಗನಿಗೆ ಕ್ಷೇತ್ರ ಕೊಟ್ಟು ಕೆಟ್ಟ ಮಾಜಿ ಪ್ರಧಾನಿ; ಈ ಬಾರಿ ತೃತೀಯ ರಂಗ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಪ್ರಧಾನಿಯಾಗುವ ಆಕಾಂಕ್ಷೆ ಮಾಜಿ ಪ್ರಧಾನಿ ದೇವೇಗೌಡರಿಗೂ ಇದ್ದಿದ್ದು ಸುಳ್ಳಲ್ಲ. ಆದರೆ, ಇಷ್ಟು ದಿನ ಪುತ್ರ ವ್ಯಾಮೋಹದಿಂದಾಗಿ ಹಿರಿಯ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದ್ದ ದೇವೇಗೌಡರು ಇಂದು ಮೊಮ್ಮಗನ ವ್ಯಾಮೋಹಕ್ಕೆ ಬಲಿಯಾಗಿ ಸ್ವಕ್ಷೇತ್ರವನ್ನೇ ತ್ಯಜಿಸುವ ಮೂಲಕ ತಮ್ಮ ಕೊನೆಯ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸುವ ಮೂಲಕ ಕಹಿಯುಂಡಿದ್ದಾರೆ.ಅಸಲಿಗೆ ಹಾಸನ ದೇವೇಗೌಡರ ತವರು ಕ್ಷೇತ್ರ. ಕಳೆದ ಮೂರು ದಶಕದಿಂದ ಲೋಕಸಭೆಯಲ್ಲಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇಲ್ಲಿನ ಮತದಾರ ಎಂದಿಗೂ ದೊಡ್ಡ ಗೌಡರ ಕೈಬಿಟ್ಟವರಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಗೌಡರು ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟರು. ಅಲ್ಲದೆ ತುಮಕೂರಿನಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿದರು. ಹಾಸನದ ಜನ ಮತ್ತೆ ಪಕ್ಷದ ಕೈಹಿಡಿದಿದ್ದಾರೆ. ಆದರೆ, ಏನೇ ಕಸರತ್ತು ಮಾಡಿದರೂ ತುಮಕೂರಿನ ಜನ ಮಾತ್ರ ಕೊನೆಗೂ ದೊಡ್ಡ ಗೌಡರ ಕೈ ಹಿಡಿಯಲೇ ಇಲ್ಲ.

ಪರಿಣಾಮ ದೇಶದ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾದ ಹೆಚ್​.ಡಿ. ದೇವೇಗೌಡ ತಮ್ಮ ಸಂಧ್ಯಾಕಾಲದ ಕೊನೆಯ ಚುನಾವಣೆಯಲ್ಲಿ ಸೋಲು ಕಾಣುವಂತಾಗಿದೆ. ಅಲ್ಲದೆ ಕಳೆದ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲೇ ಇದ್ದ ಪಕ್ಷವನ್ನು ಮೈತ್ರಿ ಕೂಟ ಅನಾಯಾಸವಾಗಿ ಬಿಜೆಪಿಗೆ ಧಾರೆ ಎರೆದಂತಾಗಿದೆ.

ಮಂಡ್ಯದಲ್ಲಿ ಸ್ವಯಂಕೃತ ಅಪರಾಧಕ್ಕೆ ಬೆಲೆ; ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಿವರಾಮೇಗೌಡ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ತಮ್ಮ ಮಗ ನಿಖಿಲ್​ ಕುಮಾರಸ್ವಾಮಿಯನ್ನು ಸಂಸತ್​ಗೆ ಕಳುಹಿಸಲೇಬೇಕು ಎಂದು ಹಠಹಿಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ಒಳಗೆ ಹಾಗೂ ಹೊರಗೆ ಅನೇಕರ ವಿರೋಧದ ನಡುವೆಯೂ ತಮ್ಮ ಮಗನನ್ನು ಕಣಕ್ಕಿಳಿಸಿದ್ದರು.

ಅಸಲಿಗೆ ನಟ ಮಾಜಿ ಸಚಿವ ಅಂಬರೀಶ್ ಅವರ ಅಕಾಲಿಕ ಮರಣದಿಂದಾಗಿ ಈ ಬಾರಿ ಮಂಡ್ಯ ಟಿಕೆಟ್ ಅನ್ನು ನಟಿ ಸುಮಲತಾ ಅವರಿಗೆ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಇದಕ್ಕೆ ಕ್ಯಾರೆ ಎನ್ನದ ಜೆಡಿಎಸ್ ನಾಯಕರು ನಿಖಿಲ್ ಅವರನ್ನೇ ಕಣಕ್ಕಿಳಿಸಿದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ಜೆಡಿಎಸ್​ಗೆ ನಷ್ಟವಾಗುತ್ತಿರಲಿಲ್ಲವೇನೋ? ಆದರೆ, ಚುನಾವಣಾ ಪ್ರಚಾರದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅವರನ್ನು ಎಗ್ಗಿಲ್ಲದೆ ಹಂಗಿಸಿದ್ದರು. ಇದು ಸಾಮಾನ್ಯವಾಗಿ ಮಂಡ್ಯ ಜನರನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಕೆರಳಿಸಿತ್ತು. ಅದರ ಪರಿಣಾಮ ಇಂದಿನ ಚುನಾವಣೆಯಲ್ಲಿ ಪ್ರತಿಫಲನವಾಗುತ್ತಿದೆ.

ಜೆಡಿಎಸ್ ನಿಜಕ್ಕೂ ಮಂಡ್ಯದಲ್ಲಿ ಗಟ್ಟಿ ನೆಲೆ ಹೊಂದಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕಡೆ ಜೆಡಿಎಸ್ ಶಾಸಕರೇ ಇದ್ದಾರೆ. ನಿಜಕ್ಕೂ ಈ ಬಾರಿ ಜೆಡಿಎಸ್​ನಿಂದ ಯಾರೇ ನಿಂತಿದ್ದರೂ ಗೆಲುವು ಖಚಿತವಾಗಿತ್ತು. ಆದರೆ ನಿಖಿಲ್ ಸ್ಪರ್ಧೆ ಜೆಡಿಎಸ್ ಕುಟುಂಬ ಪಕ್ಷ ಎಂಬ ಆರೋಪಕ್ಕೆ ನೀರೆರೆಯುವಂತಿತ್ತು. ಪರಿಣಾಮ ದೊಡ್ಡ ಗೌಡರ ಪಕ್ಷದ ಕುಟುಂಬ ರಾಜಕಾರಣಕ್ಕೆ ಬೇಸತ್ತ ಮತದಾರ ಜೆಡಿಎಸ್​ ಪಕ್ಷಕ್ಕೆ ಬೆನ್ನುತೋರಿಸಿದ್ದಾನೆ. ಪರಿಣಾಮ ಮೊದಲ ಚುನಾವಣೆಯಲ್ಲೇ ನಿಖಿಲ್ ಸೋಲಿನ ಕಹಿ ಅನುಭವಿಸುವಂತಾಗಿದೆ.

ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ಇಡೀ ರಾಜ್ಯದಲ್ಲಿ ಜೆಡಿಎಸ್ ಗಳಿಸಲು ಸಾಧ್ಯವಾದದ್ದು ಕೇವಲ 1 ಸ್ಥಾನ ಮಾತ್ರ. ಇನ್ನೂ ಮಂಡ್ಯದಲ್ಲೇ ಸೋಲನುಭವಿಸಿರುವುದು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಅಲ್ಲದೆ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಜೆಡಿಎಸ್​ಗೆ ಮಂಡ್ಯ ವಿಧಾನಸಭೆ ಚುನಾವಣೆಯಲ್ಲೂ ಕಾಡುವ ಸಾಧ್ಯತೆ ಇದೆ. ಹೀಗಾಗಿ ಈ ಸೋಲಿನಿಂದ ಕಾಂಗ್ರೆಸ್ ಚೇತರಿಸಿಕೊಂಡರೂ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಚೇತರಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ.

Comments are closed.