ಮೈಸೂರು: ಮೈಸೂರಿನಲ್ಲಿ ನಡೆದ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗಲ್ಲ. ನಾವು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಿಕೊಂಡಿದ್ದೇವೆ. ಅದರಲ್ಲಿ ಈ ವಿಚಾರ ಇಲ್ಲ. ಆದ್ದರಿಂದ ಮುಖ್ಯಮಂತ್ರಿಯೊಂದಿಗೆ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಡೀ ರಾಜ್ಯದಲ್ಲಿ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆರ್ಥಿಕವಾಗಿ ಹಿಂದುಳಿದವರೂ ತಮ್ಮ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯಲಿ ಎಂದು ಆಸೆ ಪಡುತ್ತಾರೆ. ಕನ್ನಡ ಭಾಷೆ ಬೇರೆ, ಮಾಧ್ಯಮ ಬೇರೆ. ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಯಲು ಯಾರ ವಿರೋಧವೂ ಇಲ್ಲ. ಆದ್ರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಕೆಲವರಿಗೆ ಗೊಂದಲ ಇದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದು. ಆದ್ರೆ ಹೃದಯದ ಭಾಷೆ ಆಗಲಾರದು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಲ್ಲದೇ, ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಕಾರಣ ಶಿಕ್ಷಣದ ಗುಣಮಟ್ಟ ಕಡಿಮೆ ಇರೋದು. ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೆ ಹೋದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಬಂದರೆ ಜಾತಿ ವ್ಯವಸ್ಥೆ ಕ್ರಮೇಣ ಕಡಿಮೆ ಆಗುತ್ತೆ. ಇಡೀ ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕಿತ್ತು. ಆಯಾ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಏಕರೂಪದ ಶಿಕ್ಷಣ ಸಿಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೇ, ನಾನು ಹಳ್ಳಿಯವನು, ನನ್ನ ಭಾಷೆ ಒರಟು. ಆದ್ರೆ ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಸೋಗಲಾಡಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಸ್ವಾಭಿಮಾನಿಗಳು ಮಾತನಾಡುವುದಿಲ್ಲ. ನಿರಭಿಮಾನಿಗಳು ಈ ರೀತಿ ಮಾತನಾಡುತ್ತಾರೆ. ಆದ್ರೆ ನಾನು ಯಾವತ್ತು ಆ ರೀತಿ ನಡೆದುಕೊಂಡಿಲ್ಲ ಎಂದು ಸಿದ್ದರಾಮಯ್ಯ ತಮ್ಮ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.