ಮಂಡ್ಯ: ಲೋಕಸಭಾ ಚುನಾವಣೆ ನಡೆದು ಅದರ ಫಲಿತಾಂಶ ಕೂಡ ನಾಳೆ ಕ್ಷಣಗಣೆ ಶುರುವಾಗಿದೆ. ಆದರೆ ಮಂಡ್ಯದಲ್ಲೊಬ್ಬ ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಫಲಿತಾಂಶಕ್ಕೂ ಮುನ್ನವೇ ಸ್ವತಃ ತಾನೇ ಮಂಡ್ಯ ಸಂಸದರಾಗಿ ನಿಖಿಲ್ ಕುಮಾರಸ್ವಾಮಿ ಎಂದು ಘೋಷಣೆ ಮಾಡಿಬಿಟ್ಟಿದ್ದಾರೆ.
ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸಂಸದರು ಎಂದು ಹೆಸರು ಬರೆಸುವ ಮೂಲಕ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಸಖತ್ ವೈರಲ್ ಆಗಿದೆ.
ಅಲ್ಲದೇ ಸಂಸದರು ಎಂದು ಬರೆಸಿ ನಿಖಿಲ್ ಕುಮಾರಸ್ವಾಮಿ ಮದುವೆಗೆ ವಿಶೇಷ ಆಹ್ವಾನಿತರು, ಸಂಸದರು, ಮಂಡ್ಯ ಜಿಲ್ಲೆ ಎಂದು ಅಭಿಮಾನಿ ಹೆಸರು ಮತ್ತು ಫೋಟೋ ಹಾಕಿಸಿದ್ದಾರೆ. ದಿನಾಂಕ ೯-೦೬-೨೦೧೯ ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಮದುವೆ ಸಮಾರಂಭಕ್ಕೆ ಈ ರೀತಿ ಬರೆಸಿ ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ಹಂಚಿದ್ದಾರೆ.
ಈ ಹಿಂದೆ ಕೆಲವು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಮಂಡ್ಯ ಜಿಲ್ಲೆ ಸಂಸದರು ನಿಖಿಲ್ ಕುಮಾರಸ್ವಾಮಿ ಎಂದು ಬೋರ್ಡ್ ಬರೆಸಿಕೊಂಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಿದ್ದಾರೆ.
ಎಕ್ಸಿಟ್ ಪೋಲ್ನಲ್ಲಿ ಹೊರ ಬಂದ ಫಲಿತಾಂಶದ ಪ್ರಕಾರ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿವೆ.