ಕರ್ನಾಟಕ

ಕೆಪಿಸಿಸಿ ನೋಟಿಸ್​​ಗೆ ಕ್ಯಾರೇ ಎನ್ನದ ರೋಷನ್​​ ಬೇಗ್​​

Pinterest LinkedIn Tumblr


ಬೆಂಗಳೂರು: “ಸ್ವಪಕ್ಷ ನಾಯಕರ ವಿರುದ್ಧ ನಾನು ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್​ ನೋಟಿಸ್​ ಜಾರಿಗೊಳಿಸಿದೆ. ಈ ನೋಟಿಸ್​​ಗೆ ನಾನು ಕ್ಯಾರೇ ಎನ್ನುವುದಿಲ್ಲ. ಕನಿಷ್ಠ ಪಕ್ಷ ಇದನ್ನು ಓದಲಿಕ್ಕೂ ಹೋಗುವುದಿಲ್ಲ. ನಾನು ಯಾರ ಬಗ್ಗೆ ಆರೋಪ ಮಾಡಿದ್ದೀನೋ, ಅದೇ ನಾಯಕರ ಆದೇಶದ ಮೇರೆಗೆ ನೋಟಿಸ್​​ ನೀಡಲಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ” ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ರೋಷನ್​​ ಬೇಗ್​​​ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ದುರಹಂಕಾರಿ ಮತ್ತು ದಿನೇಶ್​​ ಗುಂಡೂರಾವ್​ ಫ್ಲಾಪ್​ ಶೋ ಅಧ್ಯಕ್ಷ ಎಂದು ಮೊದಲಿಗೆ ಶಾಸಕ ರೋಷನ್​​ ಬೇಗ್​​ ಮಾಧ್ಯಮದಲ್ಲಿ ಹರಿಹಾಯ್ದಿದ್ದರು. ಬಳಿಕ ಕಾಂಗ್ರೆಸ್​ ನಾಯಕರ ವಿರುದ್ಧವೇ ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ಆರೋಪ ಮಾಡಿದ್ದಕ್ಕೆ ಕಾರಣ ಕೇಳಿ ರೋಷನ್ ಬೇಗ್‌ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ನೋಟಿಸ್ ಜಾರಿ ಮಾಡಿದ್ದರು.

ಕಾಂಗ್ರೆಸ್​ ನಾಯಕರಿಗೆ ಬಫೂನ್, ಆರೋಗೆಂಟ್ ಹಾಗೂ ಫ್ಲಾಪ್ ಶೋ ಎಂಬಿತ್ಯಾದಿ ಪದಗಳನ್ನು ಬಳಸಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದೀರಿ. ಬಹಿರಂಗವಾಗಿಯೇ ಇಂಥಹ ಹೇಳಿಕೆಗಳನ್ನು ನೀಡಿ ಪಕ್ಷದ ತತ್ವ-ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಈ ಪಕ್ಷ ವಿರೋಧಿ ಚಟುವಟಿಕೆ ಎಂದು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಇನ್ನು ಈ ನೋಟಿಸ್​​ಗೆ ಸಂಬಂಧಿಸಿದಂತೆ ರೋಷನ್​​ ಬೇಗ್​​​ ಟ್ವೀಟ್​ ಮಾಡಿದ್ದಾರೆ. ಈ ನೋಟಿಸ್​ಗೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ನಾನು ಯಾರ ಬಗ್ಗೆ ಆರೋಪ ಮಾಡಿದ್ದೀನೋ, ಇವರ ಆದೇಶದ ಮೇರೆಗೆ ನೋಟಿಸ್​ ನೀಡಲಾಗಿದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ದವಾಗಿದ್ದೇನೆ ಎಂದು ಬೇಗ್​ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಜತೆಗೆ ತಂದೆ ರೋಷನ್ ಬೇಗರನ್ನ ಸಮರ್ಥಿಸಿಕೊಂಡು ಮಗ ರುಮಾನ್ ಬೇಗ್ ಕೂಡ ಟ್ವೀಟ್​ ಮಾಡಿದ್ದಾರೆ. ಇದೇ ವೇಳೆ ಬಿಜೆಪಿಗೆ ಮತಹಾಕುವ ಮುಸಲ್ಮಾನರನ್ನ ಅಪರಾಧಿಗಳು ಎಂಬಂತೆ ನೋಡಲಾಗ್ತಿದೆ. ನಿಜಾರ್ಥದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಬೇಕಾಬಿಟ್ಟಿ​​ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

Comments are closed.