ಕಳೆದ ಎರಡು ತಿಂಗಳ ಹಿಂದಷ್ಟೇ ರಮೇಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು. ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್ ರನ್ನು ಕರೆದುಕೊಂಡು ಮುಂಬೈಗೆ ಹೋಗಿ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟಿದ್ದರು. ಆಗ ಹೇಗೋ ಮಾಡಿ ಜಾಧವ್ ಹೊರತು ಪಡಿಸಿ ಉಳಿದವರನ್ನು ಸುಮ್ಮನಿರಿಸುವಲ್ಲಿ ಹಿರಿಯರು ಯಶಸ್ವಿಯಾಗಿದ್ದರು. ನಂತರ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದರು. ಆದರೆ ಇದೀಗ ರಮೇಶ್ ಮತ್ತೆ ಆಕ್ಟೀವ್ ಆಗಿದ್ದಾರೆ. ತಮ್ಮ ಆಪ್ತರನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸಿದ್ದಾರೆ.
ಪ್ರಸ್ತುತ ಆರು ಶಾಸಕರನ್ನು ನಾನು ಕರೆದು ತರ್ತೇನೆ ಅಂತ ಬಿಜೆಪಿ ನಾಯಕರಿಗೆ ಭರವಸೆ ಕೊಟ್ಟಿದ್ದಾರೆ. ತಮ್ಮ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ಗೂ ಬರದೆ ಅಜ್ಞಾತ ಸ್ಥಳದಲ್ಲಿಯೇ ಕುಳಿತು ಉಳಿದ ಶಾಸಕರನ್ನು ಒಂದು ಕಡೆ ಸೇರಿಸಿ ರಿಸೈನ್ ಮಾಡಿಸಲು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ನಾಗೇಂದ್ರ ಫಲಿತಾಂಶದ ನಂತರ ನಾವು ಒಮ್ಮತದ ನಿರ್ಧಾರ ತೆಗೆದುಕೊಳ್ತೇವೆ ಅಂತ ಹೇಳಿದ್ದಾರೆ. ಇದು ಮತ್ತೆ ಅತೃಪ್ತರೆಲ್ಲರೂ ಒಟ್ಟಾಗ್ತಿದ್ದೇವೆಂಬುದನ್ನು ತೋರಿಸುತ್ತಿದೆ.
ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ತಮ್ಮ ಆಪ್ತ ಶಾಸಕರನ್ನು ಕರೆಸಿ ಸಭೆ ನಡೆಸೋಕೆ ಮುಂದಾಗಿದ್ದಾರೆ. ನಾಗೇಂದ್ರ, ಕುಮಟಳ್ಳಿ, ಭೀಮಾನಾಯ್ಕ, ಪ್ರತಾಪ್ ಗೌಡ ಸೇರಿದಂತೆ ಎಲ್ಲರನ್ನ ಕರೆದು ಚರ್ಚಿಸಿ ದೆಹಲಿಗೆ ತೆರಳುವ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಕಾಂಗ್ರೆಸ್ ಅತೃಪ್ತ ಶಾಸಕರು ಮತ್ತೆ ಆಕ್ಟ್ಯೀವ್ ಆಗಿದ್ದಾರೆ. ಅದ್ರಲ್ಲೂ ರಮೇಶ್ ಜಾರಕಿಹೊಳಿ ತಮ್ಮ ಶಾಸಕರನ್ನ ಒಟ್ಟುಗೂಡಿಸುವ ಮೂಲಕ ರಾಜೀನಾಮೆ ನೀಡೋಕೆ ಪ್ಲಾನ್ ರೂಪಿಸ್ತಿದ್ದಾರೆ. ಮೇ 25ರ ನಂತರ ರಿಸೈನ್ ಮಾಡುವ ಸಾಧ್ಯತೆಗಳೂ ಇವೆ. ಇವರನ್ನು ಮುಂದಿಟ್ಟುಕೊಂಡು ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಸದ್ದಿಲ್ದೆ ರಣತಂತ್ರ ಹೆಣೆಯುತ್ತಿದ್ದಾರೆ.