ಕರ್ನಾಟಕ

ಬೆಂಗಳೂರು ಉತ್ತರ: ಮತ್ತೆ ‘ಕೈ’ ಭದ್ರಕೋಟೆ ಮಾಡುವಲ್ಲಿ ಯಶಸ್ವಿಯಾಗಲಿದ್ದಾರಾ ಮೈತ್ರಿ ಅಭ್ಯರ್ಥಿ?

Pinterest LinkedIn Tumblr


ತೀವ್ರ ಹಣಾಹಣಿಯ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ಕೂಡ ಒಂದಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯ ಸಚಿವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದರಿಂದ ತೀವ್ರ ಕುತೂಹಲವನ್ನು ಈ ಕ್ಷೇತ್ರ ಕೆರಳಿಸಿದೆ. ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ ಸ್ಪರ್ಧೆ ಮಾಡಿದರೆ, ಇವರ ಪ್ರತಿಸ್ಪರ್ಧಿಯಾಗಿ ಮೈತ್ರಿ ಅಭ್ಯರ್ಥಿಯಾಗಿ ಸಚಿವ ಕೃಷ್ಣ ಬೈರೇಗೌಡ ಅಖಾಡಕ್ಕೆ ಧುಮುಕಿದ್ದಾರೆ.

ಬೆಂಗಳೂರು ಉತ್ತರ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕೆ.ಆರ್.ಪುರ, ದಾಸರಹಳ್ಳಿ, ಹೆಬ್ಬಾಳ, ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್​, ಪುಲಿಕೇಶಿ ನಗರ(ಮೀಸಲು), ಯಶವಂತಪುರ, ಮಲ್ಲೇಶ್ವರಂ ಎಂಟು ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಶಾಸಕರು, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್​ ಹಾಗೂ ಒಂದರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರ ಏಳು ಶಾಸಕರು ಕೆಲಸ ಮಾಡಿರುವುದು ಅವರ ಗೆಲುವಿನ ವಿಶ್ವಾಸ ಮೂಡುವಂತೆ ಮಾಡಿದೆ. ಅಲ್ಲದೇ, ಕೃಷ್ಣ ಭರೇಗೌಡ ಅವರು ಮೂಲತಃ ಇಲ್ಲಿಯವರೇ ಆಗಿದ್ದು, ಇದೇ ಕ್ಷೇತ್ರ ವ್ಯಾಪ್ತಿಯ ಬ್ಯಾಟರಾಯನಪುರ ವಿಧಾನಸಭೆಯಿಂದ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿರುವುದು ಅವರಿಗೆ ವರವಾಗಿ ಪರಿಣಮಿಸಿದೆ. ಅಲ್ಲದೇ, ವಲಸೆ ಬಂದಿರುವ ಸದಾನಂದಗೌಡ ಅವರು ಎರಡು ಬಾರಿಗೆ ಈ ಕ್ಷೇತ್ರದಿಂದ ಆರಿಸಿ ಹೋಗಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದರೂ ಕ್ಷೇತ್ರದ ಮಹತ್ತರ ಅಭಿವೃದ್ಧಿಗೆ ಶ್ರಮಿಸಿಲ್ಲ. ಇಲ್ಲಿನ ಜನರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿಲ್ಲ ಎಂಬ ಆರೋಪವೂ ಕ್ಷೇತ್ರದ ಜನರಿಂದ ಕೇಳಿಬಂದದ್ದು ಮೈತ್ರಿ ಅಭ್ಯರ್ಥಿಗೆ ವರದಾನವಾದಂತಿದೆ.

ಇನ್ನು ಸದಾನಂದಗೌಡ ಅವರ ಗೆಲುವಿನ ಅಂಶಗಳನ್ನು ನೋಡುವುದಾದರೆ ಮೋದಿ ಅಲೆ, ಸಂಪ್ರದಾಯ ಬಿಜೆಪಿ ಮತಗಳು ಮತ್ತೆ ಅವರ ಕೈಹಿಡಿಯಲಿವೆ ಎಂದು ಹೇಳಬಹುದು. ಅಲ್ಲದೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇವರ ಪರವಾಗಿ ರೋಡ್​ ಶೋ ನಡೆಸಿ, ಪ್ರಚಾರ ಮಾಡಿದ್ದು, ಭಾರೀ ಬದಲಾವಣೆಗೆ ಕಾರಣವಾಗದಿದ್ದರೂ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಅನುಕೂಲವಾಗಿದೆ. ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಮಂತ್ರಿ ಎಂಬ ಬಿರುದುಗಳು ಸದಾನಂದಗೌಡರ ಗೆಲುವಿಗೆ ಪಾತ್ರವಹಿಸಬಹುದು ಎಂದು ಹೇಳಬಹುದಾದರೂ, ಅವರ ಗೆಲುವು ಅಷ್ಟು ಸುಲಭದ ಹಾದಿಯೇನಾಗಿಲ್ಲ. ಇನ್ನು ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯ ಮುಖಂಡರು ಈ ಕ್ಷೇತ್ರದಲ್ಲಿ ಮಂಡ್ಯ, ಮೈಸೂರಿನಂತೆ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕದೆ ಇದ್ದರೂ ಬೆಂಗಳುರು ದಕ್ಷಿಣ ಕ್ಷೇತ್ರದಲ್ಲಿ ಕಂಡುಬಂದ ಮೈತ್ರಿಯ ಒಗ್ಗಟ್ಟು ಇಲ್ಲಿ ಕಂಡುಬಂದಿಲ್ಲ. ಮೈತ್ರಿ ನಾಯಕರಲ್ಲಿ ಆಂತರಿಕ ಅಸಮಾಧಾನ ಇದ್ದೇ ಇದೆ ಎಂಬುದು ತೆರೆದಿಟ್ಟ ಸತ್ಯ. ಯಶವಂಶಪುರ ಕಾಂಗ್ರೆಸ್​ ಶಾಸಕ ಎಸ್​.ಟಿ.ಸೋಮಶೇಖರ್ ಮೈತ್ರಿಯಿಂದ ಅಸಮಾಧಾನಗೊಂಡು, ಸಮಾನ ಮನಸ್ಕ ಶಾಸಕರ ಸಭೆಯನ್ನು ಕರೆದಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ. ಮೇಲ್ನೋಟಕ್ಕೆ ಮೈತ್ರಿ ಚೆನ್ನಾಗಿದೆ ಎಂದು ಬಿಂಬಿಸಿದರೂ ಆಂತರ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂದು ಹೇಳುವುದು ಕಷ್ಟ. ಹೀಗಾಗಿ ಈ ಆಂತರಿಕ ಅಸಮಾಧಾನದ ಫಲ ಸದಾನಂದಗೌಡರಿ ಅವರಿಗೆ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಈ ಹಿಂದೆ ಈ ಕ್ಷೇತ್ರ ಕಾಂಗ್ರೆಸ್​ ಭದ್ರಕೋಟೆಯೇ ಆಗಿತ್ತು. ಸಿಕೆ ಜಾಫರ್​ ಶರೀಫ್​ ಸತತ 7ಬಾರಿ ಗೆದ್ದು, ಈ ಕ್ಷೇತ್ರವನ್ನು ಕಾಂಗ್ರೆಸ್​ನ ಭದ್ರ ಕೋಟೆಯನ್ನಾಗಿ ಮಾಡಿದ್ದರು. ಆದರೆ 2004ರಲ್ಲಿ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್ ಭದ್ರಕೋಟೆಯನ್ನು ಕೆಡವಿ ಹಾಕಿತ್ತು. 2004ರಲ್ಲಿ ಡಿ.ವಿ. ಸದಾನಂದಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿ ಸಿ, ಕಾಂಗ್ರೆಸ್​ನ ಸಿ. ನಾರಾಯಣಸ್ವಾಮಿಯವರನ್ನು ಸೋಲಿಸಿದರು. 2009ರ ಚುನಾವಣೆಯಲ್ಲಿ ಡಿ.ಬಿ. ಚಂದ್ರೇಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡಿ, ಕಾಂಗ್ರೆಸ್​ನ ಜಾಫರ್​ ಅವರನ್ನು ಸೋಲಿಸಿದ್ದರು. ನಂತರ 2014ರ ಚುನಾವಣೆಯಲ್ಲಿ ಮತ್ತೆ ಸದಾನಂದಗೌಡ ಸ್ಪರ್ಧಿಸಿ, ಗೆಲುವು ದಾಖಲಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಡಿವಿ ಸದಾನಂತಗೌಡ 7,18,326 ಮತಗಳನ್ನು ಪಡೆದರೆ ಕಾಂಗ್ರೆಸ್​ನ ಸಿ ನಾರಾಯಣ ಸ್ವಾಮಿ 4,88,562 ಮತಗಳನ್ನು ಪಡೆದಿದ್ದರು.

ಇಲ್ಲಿ 24,01,472 ಮತದಾರರು ಇದ್ದಾರೆ. ಇದರಲ್ಲಿ 52.48 ರಷ್ಟು ಪುರುಷ ಮತದಾರರಿದ್ದರೆ, 47. 67ರಷ್ಟು ಮಹಿಳೆಯರಿದ್ದಾರೆ. 2014ರ ಚುನಾವಣೆಯಲ್ಲಿ ಶೇ.56.53ರಷ್ಟು ಮತದಾನವಾಗಿದ್ದರೆ, ಪ್ರಸ್ತುತ ಚುನಾವಣೆಯಲ್ಲಿ ಶೇ.50.03ರಷ್ಟು ಮತದಾನವಾಗಿದೆ.

ಕೆಆರ್​ ಪುರ: ಕಾಂಗ್ರೆಸ್​ನ ಭೈರತಿ ಬಸವಾರಾಜು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಕಾಂಗ್ರೆಸ್​, ಬಿಜೆಪಿ ಜಿದ್ದಾಜಿದ್ದಿನ ಕಣವಾದ ಈ ಕ್ಷೇತ್ರದಲ್ಲಿ ಭೈರತಿ ಬಸವರಾಜು ಗೆಲುವು ಸಾಧಿಸಿದ್ದರು. ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ರಿಯಲ್​ ಎಸ್ಟೇಟ್​ ಈ ಕ್ಷೇತ್ರದ ಪ್ರಮುಖ ಉದ್ಯಮ ಎಂದರೂ ತಪ್ಪಾಗಲಾರದು. ಜತೆಗೆ ಹಲವು ಸಾಫ್ಟ್​ವೇರ್​ ಸಂಸ್ಥೆಗಳು, ಇಟ್ಟಿಗೆ ಫ್ಯಾಕ್ಟರಿಗಳು ಈ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯಮವನ್ನು ಸೃಷ್ಟಿಸಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

ದಾಸರಹಳ್ಳಿ: ಜೆಡಿಎಸ್​ನ ಆರ್​ ಮಂಜುನಾಥ್​ ಈ ಕ್ಷೇತ್ರದ ಶಾಸಕರು. ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ವಲಸಿಗ ಬಡ ಹಾಗೂ ಮಧ್ಯಮ ವರ್ಗದ ಮತದಾರರು ಹೆಚ್ಚಿದ್ದು, ಒಕ್ಕಲಿಗ ಮತ ಹೆಚ್ಚಿನ ಪ್ರಾಧಾನ್ಯತೆ ಹೊಂದಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

ಯಶವಂತಪುರ: ಕಾಂಗ್ರೆಸ್​ನ ಎಸ್​.ಟಿ ಸೋಮಶೇಖರ್​ ಇಲ್ಲಿನ ಶಾಸಕರು. ಶೋಭಾ ಕರಂದ್ಲಾಜೆ ಈ ಹಿಂದೆ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದ ಈ ಕ್ಷೇತ್ರ ನಂತರ ಕಾಂಗ್ರೆಸ್​ ತೆಕ್ಕೆಗೆ ಸೇರಿತು. ಇಲ್ಲಿನ ಶಾಸಕರಿಗೆ ಮೈತ್ರಿ ಬಗ್ಗೆ ಅಸಮಾಧಾನವಿರುವುದರಿಂದ ಕಾಂಗ್ರೆಸ್​ಗೆ ಸಿಗುವ ಅಂತರದ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಹೆಬ್ಬಾಳ: ಕಾಂಗ್ರೆಸ್​ನ ಭೈರತಿ ಸುರೇಶ್​ ಇಲ್ಲಿನ ಶಾಸಕರು. ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಕೂಡ ಈಗ ಕೈ ವಶದಲ್ಲಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

ಮಹಾಲಕ್ಷ್ಮಿ ಲೇಔಟ್​: ಜೆಡಿಎಸ್​ನ ಕೆ. ಗೋಪಾಲಯ್ಯ ಇಲ್ಲಿನ ಶಾಸಕರು. ಕಾಂಗ್ರೆಸ್​ ಬಿಜೆಪಿ ಜಿದ್ದಾಜಿದ್ದಿನ ಕಣವಾದ ಇಲ್ಲಿ ನೇ.ಲ. ನರೇಂದ್ರ ಬಾಬು ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದು, ಕೈಗೆ ನಷ್ಟವಾಯಿತು. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಸಿಗುವ ಅಂತರದ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಪುಲಕೇಶಿ ನಗರ (ಮೀಸಲು): ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದ ಅಂಖಡ ಶ್ರೀನಿವಾಸ್​ ಮೂರ್ತಿ ಇಲ್ಲಿನ ಶಾಸಕರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಇದು ಜೆಡಿಎಸ್​ ಕಾಂಗ್ರೆಸ್​ ನಡುವಿನ ಪೈಪೋಟಿಗೆ ಹಲವು ಬಾರಿ ಸಾಕ್ಷಿಯಾದ ಕ್ಷೇತ್ರ. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

ಮಲ್ಲೇಶ್ವರಂ : ಬಿಜೆಪಿ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದ ಶಾಸಕರು ಡಾ. ಅಶ್ವತ್​ ನಾರಾಯಣ್. ಅಶ್ವತ್​ ನಾರಾಯಣ್​ ಆರ್​ಎಸ್​ಎಸ್​ನ ಕಟ್ಟಾಳು ಮತ್ತು ಬಿಜೆಪಿ ಹೈಕಮಾಂಡ್​ ಜತೆಗೆ ಉತ್ತಮ ಸಂಪರ್ಕ ಹೊಂದಿರುವ ಯುವ ನಾಯಕ. ಸದಾ ಜನರ ಸಂಪರ್ಕದಲ್ಲಿರುವ ನಾರಾಯಣ್​, ಸಜ್ಜನ ರಾಜಕಾರಣಿ ಅನಿಸಿಕೊಂಡಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

ಬ್ಯಾಟರಾಯನಪುರ : ಕಾಂಗ್ರೆಸ್​ ಪ್ರಭಾವಿ ನಾಯಕ ಕೃಷ್ಣ ಭೈರೇಗೌಡ ಇಲ್ಲಿನ ಶಾಸಕರು. ಕಾಂಗ್ರೆಸ್​ – ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವದ್ಧಿ ಸಚಿವರಾಗಿರುವ ಭೈರೇಗೌಡ, ಈ ಹಿಂದಿನ ಕಾಂಗ್ರೆಸ್​ ಸರ್ಕಾರದಲ್ಲೂ ಕೃಷಿ ಸಚಿವರಾಗಿದ್ದರು. ಇದೀಗ ಇವರೇ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಿಂದ ಕಾಂಗ್ರೆಸ್​ಗೆ ಹೆಚ್ಚು ಅಂತರ ಸಿಗುವ ಸಾಧ್ಯತೆ ಇದೆ.

Comments are closed.