ರಾಷ್ಟ್ರೀಯ

ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸತತ 4ನೇ ಗೆಲುವು?

Pinterest LinkedIn Tumblr


ಬೆಂಗಳೂರು: ಉತ್ತರ ಪ್ರದೇಶ ರಾಜ್ಯದಲ್ಲಿ ನೆಹರೂ ಕುಟುಂಬದವರ ಹಿಡಿತದಲ್ಲಿರುವ ಕೆಲವೇ ಕ್ಷೇತ್ರಗಳಲ್ಲಿ ಅಮೇಥಿಯೂ ಒಂದು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರು ತೀವ್ರ ಪೈಪೋಟಿ ನೀಡಲು ಯಶಸ್ವಿಯಾಗಿದ್ದ ಬಿಜೆಪಿಯ ಸ್ಮೃತಿ ಇರಾನಿ ಅವರ ಪ್ರಯತ್ನ ಈ ಬಾರಿಯೂ ಕೈಗೂಡದಿರುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿ ಅವರ ಗೆಲುವಿನ ಅಂತರ ಈ ಬಾರಿ ಇನ್ನಷ್ಟು ಕಡಿಮೆಯಾಗಬಹುದೆನ್ನಲಾಗಿದೆ.

1967ರಲ್ಲಿ ರಚನೆಯಾದ ಅಮೇಥಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್​ನ ಭದ್ರಕೋಟೆಯಾಗಿ ರೂಪುಗೊಂಡಿದ್ದು 80ರ ದಶಕದಲ್ಲಿ. ಗಾಂಧಿ ಕುಟುಂಬದ ಪಾಲಿನ ರಕ್ಷಾ ಕವಚವೆನಿಸಿದೆ. ಆದರೆ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಇಲ್ಲಿ ಸೋತೇ ಇಲ್ಲ ಎನ್ನುವಂತಿಲ್ಲ. 1967ರಿಂದ ಈವರೆಗೆ ಈ ಕ್ಷೇತ್ರಕ್ಕೆ 15 ಬಾರಿ ಚುನಾವಣೆಗಳಾಗಿವೆ. 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಇಲ್ಲಿ ಕಾಂಗ್ರೆಸ್​ಗೆ ಸೋಲಿನ ರುಚಿ ತೋರಿಸಿತ್ತು. ರವೀಂದ್ರ ಪ್ರತಾಪ್ ಸಿಂಗ್ ಅವರು ಸಂಜಯ್ ಗಾಂಧಿ ಅವರನ್ನೇ ಸೋಲಿಸಿದ್ದರು. 1998ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಅಲೆಯ ನೆರವಿನಿಂದ ಇಲ್ಲಿನ ಬಿಜೆಪಿ ಅಭ್ಯರ್ಥಿ ಡಾ. ಸಂಜಯ್ ಸಿನ್ಹ ಅವರು ಕಾಂಗ್ರೆಸ್ ಭದ್ರಕೋಟೆ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಅದನ್ನು ಹೊರತುಪಡಿಸಿದರೆ ಈ ಕ್ಷೇತ್ರವು ಕಾಂಗ್ರೆಸ್​ನ ಹಿಡಿತದಲ್ಲೇ ಇದೆ. ರಾಜೀವ್ ಗಾಂಧಿ ಅವರಂತೂ ಇಲ್ಲಿ ಅಕ್ಷರಶಃ ಎದುರಾಳಿಗಳನ್ನ ನಾಲ್ಕು ಬಾರಿ ಸತತವಾಗಿ ಧೂಳೀಪಟ ಮಾಡಿದ್ದರು. 2 ಚುನಾವಣೆಗಳಲ್ಲಿ ಅವರು ಶೇ. 80ಕ್ಕಿಂತ ಹೆಚ್ಚು ಮತ ಗಳಿಸಿ ಜಯಭೇರಿ ಭಾರಿಸಿದ್ದರು.

2014ರಲ್ಲಿ ಸ್ಮೃತಿ ಇರಾನಿ ಅವರು ಮೋದಿ ಅಲೆಯ ಸಹಾಯದಿಂದ 3 ಲಕ್ಷ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯಲ್ಲಿ ಸೋತರೂ ಸ್ಮೃತಿ ಅವರು ಈ ಕ್ಷೇತ್ರದೊಂದಿಗೆ ಸಂಪರ್ಕ ಬಿಟ್ಟಿರಲಿಲ್ಲ. ಇದು ಈ ಕ್ಷೇತ್ರದಲ್ಲಿ ಕಮಲವನ್ನು ಮತ್ತೆ ಬೇರೂರುವಂತೆ ಮಾಡಿತ್ತು. 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದ್ದು ಇದಕ್ಕೆ ಸಾಕ್ಷಿ. ವಿಪರ್ಯಾಸವೆಂದರೆ ತನ್ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಸಮಾಜವಾದಿ ಪಕ್ಷ ಉಳಿದ ಒಂದನ್ನು ಗೆದ್ದುಕೊಂಡಿತ್ತು.

ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರನ್ನು ಈ ಬಾರಿ ಬಚಾವ್ ಆಗುವುದಿದ್ದರೆ ಅದು ಸಮಾಜವಾದಿ ಪಕ್ಷದಿಂದಲೇ ಎನ್ನಬಹುದು. ಎಸ್​ಪಿ ಪಕ್ಷ ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ. ಕಾಂಗ್ರೆಸ್ ಮತಗಳು ವಿಭಜನೆಯಾಗದಿರಲಿ ಎಂಬ ಉದ್ದೇಶದಿಂದ ಎಸ್​ಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇದು ರಾಹುಲ್ ಗೆಲುವಿಗೆ ಕಾರಣವಾಗಬಹುದಾದ ಅಂಶಗಳಲ್ಲಿ ಒಂದು ಎನ್ನುತ್ತವೆ ಮತಗಟ್ಟೆ ಸಮೀಕ್ಷೆಗಳು.

ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯ ಕಮಲದ ಪರವಾಗಿದ್ದ ಅಮೇಥಿ ಜನರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ನಿಷ್ಠೆಯನ್ನು ಬದಲಿಸದಿರಲು ನಿರ್ಧರಿಸಿರುವಂತಿದೆ.

ಅಮೇಥಿಯಲ್ಲಿ ಈ ಬಾರಿ ರಾಹುಲ್, ಸ್ಮೃತಿ ಇರಾನಿ ಸೇರಿ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡದ ಡಾ| ಯು.ಪಿ. ಶಿವಾನಂದ ಅವರೂ ಇಲ್ಲಿ ಸ್ಪರ್ಧಿಸಿರುವುದು ಕರ್ನಾಟಕದ ಮಟ್ಟಿಗೆ ಮತ್ತೊಂದು ವಿಶೇಷ.

ಈ ಹಿಂದಿನ ಫಲಿತಾಂಶಗಳು:
2014: ರಾಹುಲ್ ಗಾಂಧಿ, ಕಾಂಗ್ರೆಸ್
2009: ರಾಹುಲ್ ಗಾಂಧಿ, ಕಾಂಗ್ರೆಸ್
2004: ರಾಹುಲ್ ಗಾಂಧಿ, ಕಾಂಗ್ರೆಸ್
1999: ಸೋನಿಯಾ ಗಾಂಧಿ, ಕಾಂಗ್ರೆಸ್
1998: ಡಾ. ಸಂಜಯ್ ಸಿನ್ಹ್, ಬಿಜೆಪಿ
1996: ಸತೀಶ್ ಶರ್ಮಾ, ಕಾಂಗ್ರೆಸ್
1991: ಸತೀಶ್ ಶರ್ಮಾ, ಕಾಂಗ್ರೆಸ್ (ಉಪಚುನಾವಣೆ)
1991: ರಾಜೀವ್ ಗಾಂಧಿ, ಕಾಂಗ್ರೆಸ್
1989: ರಾಜೀವ್ ಗಾಂಧಿ, ಕಾಂಗ್ರೆಸ್
1984: ರಾಜೀವ್ ಗಾಂಧಿ, ಕಾಂಗ್ರೆಸ್
1981: ರಾಜೀವ್ ಗಾಂಧಿ, ಕಾಂಗ್ರೆಸ್ (ಉಪಚುನಾವಣೆ)
1980: ಸಂಜಯ್ ಗಾಂಧಿ, ಕಾಂಗ್ರೆಸ್
1977: ರವೀಂದ್ರ ಪ್ರತಾಪ್ ಸಿಂಗ್, ಜನತಾ ಪಕ್ಷ
1971: ವಿದ್ಯಾಧರ್ ಬಾಜಪೇಯಿ, ಕಾಂಗ್ರೆಸ್
1967: ವಿದ್ಯಾಧರ್ ಬಾಜಪೇಯಿ, ಕಾಂಗ್ರೆಸ್

2014ರ ಅಮೇಥಿ ಚುನಾವಣೆ ಫಲಿತಾಂಶದ ವಿವರ:
ರಾಹುಲ್ ಗಾಂಧಿ(ಕಾಂಗ್ರೆಸ್): 4,08,651 ವೋಟುಗಳು
ಸ್ಮೃತಿ ಇರಾನಿ(ಬಿಜೆಪಿ): 3,00,748
ಧರ್ಮೇಂದ್ರ ಪ್ರತಾಪ್ ಸಿಂಗ್(ಬಿಎಸ್​ಪಿ): 57,716
ಡಾ. ಕುಮಾರ್ ವಿಶ್ವಾಸ್(ಎಎಪಿ): 25,527

Comments are closed.