ಕರ್ನಾಟಕ

ದಕ್ಷಿಣ ಭಾರತದಲ್ಲಿ ನಮ್ಮ ರಾಜ್ಯ ಹೊರತುಪಡಿಸಿ ಉಳಿದೆಡೆ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ!

Pinterest LinkedIn Tumblr


ನವದೆಹಲಿ: 17ನೇ ಲೋಕಸಭೆಯ ಚುನಾವಣೆಯ ಏಳು ಹಂತದ ಮತದಾನ ಇಂದು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನದಿಂದ ಹಿಡಿದು ಆರನೇ ಹಂತದವರೆಗೂ ಐಪಿಎಸ್​ಒಎಸ್​ ಹಾಗೂ ನ್ಯೂಸ್​ 18 ಪ್ರತಿನಿಧಿಗಳು ಆಯ್ಕೆ ಮಾಡಿಕೊಂಡ ಕ್ಷೇತ್ರಗಳ ಪ್ರತಿ ಮತಗಟ್ಟೆಯಲ್ಲೂ ಮತದಾರರ ಅಭಿಪ್ರಾಯ ಕಲೆ ಹಾಕಿ, ಚುನಾವಣೋತ್ತರ ಸಮೀಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಅದರಂತೆ ದಕ್ಷಿಣ ಭಾರತ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಹೀಗಿವೆ.

ಅದರಂತೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮತ್ತೆ ಪಾರುಪತ್ಯ ಸಾಧಿಸಲಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳು ಅಸ್ತಿತ್ವ ರಚಿಸಲು ಮತದಾರರು ಅವಕಾಶವನ್ನೇ ನೀಡಿಲ್ಲ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​-ಜೆಡಿಎಸ್​ ಚುನಾವಣಾಪೂರ್ವವೇ ಮೈತ್ರಿ ಮಾಡಿಕೊಂಡು, ಚುನಾವಣೆ ಎದುರಿಸಿದ್ದವು. ಸೀಟು ಹಂಚಿಕೆ ಗೊಂದಲ, ಕಾರ್ಯಕರ್ತರ ಅಸಮಾಧಾನ ಇವುಗಳ ಫಲವಾಗಿ ಮೈತ್ರಿ ಅಭ್ಯರ್ಥಿಗಳು ಬಿಜೆಪಿ ಗೆಲುವಿನ ಓಟವನ್ನು ಕಟ್ಟಿಹಾಕಲು ವಿಫಲವಾಗಿದೆ. 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 21ರಿಂದ 23 ಸ್ಥಾನ ಗಳಿಸಿದರೆ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಕೇವಲ 5ರಿಂದ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದೆ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು.

ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲೇ ಇರುವ ತಮಿಳುನಾಡಿನಲ್ಲಿ ಈ ಬಾರಿಯೂ ಸ್ಥಳೀಯ ಪಕ್ಷಗಳು ಮತ್ತೆ ವಿಜಯದ ಕೇಕೆ ಹಾಕಲಿವೆ. 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ 14ರಿಂದ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಇದರ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 22ರಿಂದ 24 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲಿದೆ.

ಹಾಗೆಯೇ ಆಂಧ್ರ ಪ್ರದೇಶದಲ್ಲೂ ಪ್ರಾದೇಶಿಕ ಪಕ್ಷಗಳೇ ಬಲಿಷ್ಠವಾಗಿವೆ. 25 ಸದಸ್ಯ ಬಲದ ಲೋಕಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 10ರಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ವೈಎಸ್​ ಜಗಮೋಹನ್​ ರೆಡ್ಡಿ ಮುಂದಾಳತ್ವದ ವೈಎಸ್​ಆರ್​ಸಿಪಿ 13ರಿಂದ 14 ಕ್ಷೇತ್ರಗಳಲ್ಲಿ ಗೆದ್ದು ಬೀಗಲಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಒಂದರಲ್ಲಿ ಗೆದ್ದರೆ, ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆ ತಿಳಿಸಿದೆ.

ಆಂಧ್ರದಿಂದ ವಿಭಜನೆಯಾದ ತೆಲಂಗಾಣ ರಾಜ್ಯದಲ್ಲೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್​ ಅವರೇ ಏಕಚಕ್ರಾಧಿಪತಿಯಾಗಲಿದ್ದಾರೆ. ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) 11ರಿಂದ 13 ಕ್ಷೇತ್ರದಲ್ಲಿ ಗೆದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್​ ತಲಾ ಒಂದರಿಂದ ಎರಡು ಕ್ಷೇತ್ರಗಳಲ್ಲಿ ಗೆಲ್ಲಲಿವೆ. ಅಸಾದುದ್ದೀನ್​ ಓವೈಸಿ ಮುಂದಾಳತ್ವದ ಎಐಎಂಐಎಂ ​ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಈ ರಾಜ್ಯದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳು ಇವೆ.

ದೇವರನಾಡು ಕೇರಳ 20 ಲೋಕಸಭಾ ಕ್ಷೇತ್ರಗಳಲ್ಲಿ ಹೊಂದಿದೆ. ಇಲ್ಲಿ ಎಲ್​ಡಿಎಫ್​ ಮೈತ್ರಿಕೂಟದಲ್ಲಿ ಬರುವ ಸಿಪಿಎಂ 12ರಿಂದ 13 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಹಾಗೆಯೇ ಯುಡಿಎಫ್​ ಕೂಟದಲ್ಲಿ ಬರುವ ಕಾಂಗ್ರೆಸ್​ 4ರಿಂದ 6 ಸ್ಥಾನ ಪಡೆದರೆ ಐಯುಎಂಎಲ್​ 1ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಹೇಳುತ್ತಿವೆ.

Comments are closed.