
ಲೊಕಸಭಾ ಚುನಾವಣೆಯಲ್ಲಿ ಲಖನೌ ಕ್ಷೇತ್ರ ಬಹಳ ಮಹತ್ವದ ಪಾತ್ರವಹಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕಲ್ಕಿ ಧಾಮನ್ ಮುಖ್ಯಸ್ಥ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ನಿಂದ, ಬಿಎಸ್ಪಿ-ಎಸ್ಪಿ ಮೈತ್ರಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಕಣದಲ್ಲಿದ್ದಾರೆ. ರಾಜನಾಥ್ ಸಿಂಗ್ ಈ ಕ್ಷೇತ್ರದಲ್ಲಿ ಗೆಲ್ಲುವುದು ಬಹುತೇಕ ಖಚಿತ ಎನ್ನುತ್ತಿದೆ ಚುನಾವಣ ಪೂರ್ವ ಸಮೀಕ್ಷೆ.
ಲಖನೌ ಕ್ಷೇತ್ರವನ್ನು ಬಿಜೆಪಿ ಹಿರಿಯ ನಾಯಕ ಅಟಲ್ಬಿಹಾರ್ ವಾಜಪೇಯಿ ಅವರು ಐದು ಬಾರಿ ಪ್ರತಿನಿಧಿಸಿದ್ದರು. ಇದರ ಪ್ರಭಾವ ಈಗಲೂ ಇದೆ ಎಂಬುದು ರಾಜಕೀಯ ತಜ್ಞರ ಮಾತು. ಹಾಗಾಗಿ ರಾಜನಾಥ್ ಸಿಂಗ್ ಗೆಲುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಅಚ್ಚರಿ ಎಂದರೆ ರಾಜನಾಥ್ ಸಿಂಗ್ ನಾಮಪತ್ರ ಸಲ್ಲಿಕೆ ಮಾಡುವವರೆಗೂ ಲಖನೌ ಕ್ಷೇತ್ರದಲ್ಲಿ ವಿಪಕ್ಷಗಳಿಂದ ಯಾರು ಕಣಕ್ಕೆ ಇಳಿಯಲ್ಲಿದ್ದಾರೆ ಎನ್ನುವ ವಿಚಾರ ಗುಟ್ಟಾಗಿಯೇ ಇತ್ತು. ಲಖನೌನ ಧಾರ್ಮಿಕ ಕೇಂದ್ರಗಳಲ್ಲಿ ಕಲ್ಕಿ ಧಾಮನ್ ಹೆಚ್ಚು ಪ್ರಭಾವ ಹೊಂದಿದೆ. ಹಾಗಾಗಿ ಅದರ ಮುಖ್ಯಸ್ಥನನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಧಾರ್ಮಿಕ ಪ್ರಭಾವ ಬಳಸಿಕೊಳ್ಳುವ ಮೂಲಕ ಮತ ಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ರಾಜನಾಥ್ ಸಿಂಗ್ಗೆ ಪ್ರಬಲ ಪೈಪೋಟಿ ನೀಡಿ ಗೆಲ್ಲಲು ಎಲ್ಲರೂ ಒಂದಾಗಬೇಕು ಎಂಬುದು ಎಸ್ಪಿ-ಬಿಎಸ್ಪಿ ಮೈತ್ರಿಯ ಲೆಕ್ಕಾಚಾರವಾಗಿತ್ತು. ಆದರೆ, ಕಾಂಗ್ರೆಸ್ ಕೃಷ್ಣಂ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅಸಮಾಧಾನ ಹೊರ ಹಾಕಿದ್ದರು. ಈ ಮೂಲಕ ಅಖಿಲೇಶ್ಗೆ ಇಲ್ಲಿ ಸೋಲಿನ ಸುಳಿವು ಸಿಕ್ಕಿದೆ ಎಂದು ಬಣ್ಣಿಸಲಾಗಿದೆ.
ಈ ಬಾರಿಯೂ ಈ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂಬುದಕ್ಕೆ ಸಾಕಷ್ಟು ಪೂರಕ ಅಂಶಗಳಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಏಳು ಗೆಲುವು ದಾಖಲಿಸಿವೆ. ಆದರೆ, ಬಿಜೆಪಿ ಕಳೆದ ಏಳು ಚುನಾವಣೆಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಭಾರೀ ಅಂತರಗಳ ಗೆಲುವು ಸಾಧಿಸಿದೆ. ಅಲ್ಲದೆ, ಕಮಲದ ಬೇರು ಈ ಭಾಗದಲ್ಲಿ ಆಳವಾಗಿ ಬೇರುರಿರುವುದರಿಂದ ಬಿಜೆಪಿ ಗೆಲ್ಲುವುದು ಬಹುತೇಕ ಖಚಿತ ಎಂದೇ ಬಣ್ಣಿಸಲಾಗುತ್ತಿದೆ.
ಕಳೆದ ಬಾರಿ ಮೋದಿ ಅಲೆಯಿಂದಾಗಿ ಒಟ್ಟು ಮತಗಳಲ್ಲಿ ರಾಜನಾಥ್ ಸಿಂಗ್ ಶೇ.54 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ರೀಟಾ ಬಹುಗಣ ಜೋಷಿ ವಿರುದ್ಧ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಅವರು ಗೆದ್ದು ಐದು ವರ್ಷಗಳಾಗಿದ್ದರೂ ರಾಜನಾಥ್ ಸಿಂಗ್ ಬಗ್ಗೆ ಜನರ ಅಭಿಪ್ರಾಯ ಬದಲಾಗಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹಾಗಾಗಿ ಅವರು ಈ ಬಾರಿ ಗೆಲ್ಲಲಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ ಕಾಂಗ್ರೆಸ್ ಧಾರ್ಮಿಕ ನಾಯಕನನ್ನು ಕಣಕ್ಕೆ ಇಳಿಸಿದೆ. ಹಾಗಾಗಿ, ಬಿಜೆಪಿಗೆ ಬೀಳುವ ಕೆಲ ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ. ರಾಜನಾಥ್ ಸಿಂಗ್ ಗೆಲ್ಲವುದು ಖಚಿತ ಎನ್ನಲಾಗಿದ್ದು, ಮತಗಳ ಅಂತರ ಕಡಿಮೆ ಆಗಬಹುದು ಎನ್ನಲಾಗಿದೆ.
ಈ ಕ್ಷೇತ್ರದ ಇತಿಹಾಸ
1991ರಿಂದ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಒಮ್ಮೆ ಪಕ್ಷೇತರ ಹಾಗೂ ಒಮ್ಮೆ ಜನತಾ ದಳ, ಭಾರತೀಯ ಲೋಕ್ ದಳ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಏಳು ಬಾರಿ ಬಿಜೆಪಿ ಏಳು ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. 1991-2009ರವರೆಗೆ ಅಟಲ್ ಬಿಹಾರಿ ವಾಜಪೇಯಿ ಈ ಕ್ಷೇತ್ರದ ಸಂಸದರಾಗಿದ್ದರು. 2009-14ರಲ್ಲಿ ಬಿಜೆಪಿಯ ಲಾಲ್ ಜಿ ತಂಡನ್ ಸಂಸದರಾದರು. 2014ರಲ್ಲಿ ರಾಜನಾಥ್ ಇಲ್ಲಿ ಗೆಲುವು ಸಾಧಿಸಿದ್ದರು.
Comments are closed.