ಬೆಂಗಳೂರು: ಬಂಗಾಳಕೊಲ್ಲಿ ಸಮುದ್ರದಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶಕ್ಕೆ ಇಂದು ಮಧ್ಯಾಹ್ನ 1 ಗಂಟೆಗೆ ಮುಂಗಾರು ಪ್ರವೇಶವಾಗಿದೆ. ಭಾರತೀಯ ಹವಾಮಾನ ನೀಡಿರುವ ಮುನ್ಸೂಚನೆ ಪ್ರಕಾರ, ಈ ಬಾರಿ ಕೇರಳಕ್ಕೆ ಜೂನ್ 6ಕ್ಕೆ ಮುಂಗಾರು ಅಡಿ ಇಡುವ ನಿರೀಕ್ಷೆ ಇದೆ. ಅದಾಗಿ ಎರಡು ದಿನಕ್ಕೆ ಕರ್ನಾಟಕದಲ್ಲಿ ಮುಂಗಾರು ಮಳೆಯಾಗಬಹುದೆಂದು ಇಲಾಖೆ ಅಂದಾಜಿಸಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ವಿಜ್ಞಾನಿ ಗವಾಸ್ಕರ್ ಅವರು ನ್ಯೂಸ್18 ಕನ್ನಡಕ್ಕೆ ಈ ವಿವರ ನೀಡಿದ್ದಾರೆ.
ಜಾಗ್ರತೆ..! ಹೆಚ್ಚಾಗಲಿದೆ ಬಿಸಿ:
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಇಂದಿನಿಂದ ಮುಂದಿನ 3 ದಿನಗಳ ಕಾಲ ಬಿಸಿಗಾಳಿ ಸಾಧ್ಯತೆ ಇದೆ. ಹೀಟ್ ವೇವ್ ನಿಂದ ಈ ಭಾಗದ ಜಿಲ್ಲೆಗಳಲ್ಲಿನ ಉಷ್ಣಾಂಶ 43 ಡಿಗ್ರಿಯಿಂದ 45 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದಲ್ಲದೆ ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ.
ಇಲ್ಲಿ ವಾಡಿಕೆಗಿಂತ ತಾಪಮಾನ 2 ಡಿಗ್ರಿಯಿಂದ 3 ಡಿಗ್ರಿ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಬಿಸಿಲಿನಿಂದ ಆದಷ್ಟೂ ದೂರವಿರಿ. ಇಲ್ಲದಿದ್ದರೆ ಮಕ್ಕಳು, ವಯಸ್ಸಾದವರು ನಿರ್ಜಲೀಕರಣ, ಸನ್ ಸ್ಟ್ರೋಕ್ನಿಂದ ಬಳಲುವ ಸಾಧ್ಯತೆ ಇದೆ ಎಂದು ಹವಾಮಾನ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜೂನ್ 8ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ?
ಮುಂಗಾರು ಮಾರುತಗಳು ಜೂನ್ 6ಕ್ಕೆ ಕೇರಳ ಪ್ರವೇಶಿಸಲಿದ್ದು, ಜೂನ್ 8 ಅಥವಾ 9ಕ್ಕೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಮಾರುತಗಳು ತೀವ್ರತೆ ಹೆಚ್ಚಾಗಿದ್ದರೆ ಒಂದೇ ದಿನಕ್ಕೆ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸುತ್ತದೆ. ಮಾರುತಗಳ ತೀವ್ರತೆ ಕಡಿಮೆಯಿದ್ದರೆ ಹೆಚ್ಚಿನ ಅವಧಿ ಕೇರಳದಲ್ಲಿಯೇ ಉಳಿಯಲಿದೆ. ಆದರೆ, ಮುಂಗಾರು ಮಳೆಯನ್ನು ಸರಿಯಾಗಿ ಅಂದಾಜಿಸುವುದು ಕಷ್ಟಸಾಧ್ಯ. ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆ ಸುರಿಯುತ್ತಿದೆ.