ಕರ್ನಾಟಕ

ಬರ; ಪ್ರವಾಸ ಮುಂದೂಡುವಂತೆ ಭಕ್ತರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಮನವಿ

Pinterest LinkedIn Tumblr


ಬೆಂಗಳೂರು: ಈ ಬಾರಿ ಬಿರುಬೇಸಿಗೆಯಿಂದಾಗಿ ರಾಜ್ಯಾದ್ಯಂತ ಭೀಕರ ಬರ ಪರಿಸ್ಥಿತಿ ತಲೆದೋರಿದೆ. ಕೆಲ ವರ್ಷಗಳ ಹಿಂದಿನವರೆಗೂ ಮಳೆಯಿಂದ ಗಿಜಿಗುಡುತ್ತಿದ್ದ ಮಲೆನಾಡಿನಲ್ಲೂ ಈಗ ನೀರಿಗೆ ಹಾಹಾಕಾರ ಶುರುವಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀರಿಗೆ ಕಡುಕಷ್ಟದ ಪರಿಸ್ಥಿತಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳವೂ ಇದಕ್ಕೆ ಹೊರತಲ್ಲ. ಮಂಜುನಾಥೇಶ್ವರನ ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರಬೇಕೆನ್ನುವ ಭಕ್ತರು ತಮ್ಮ ಪ್ರವಾಸವನ್ನು ಕೆಲ ದಿನಗಳ ಕಾಲ ಮುಂದೂಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.

ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಬೇಕೆಂದು ಅವರು ಭಕ್ತರಲ್ಲಿ ವಿನಂತಿ ಮಾಡಿ ಪ್ರಕಟಣೆ ನೀಡಿದ್ದಾರೆ.

ಈಗ ಕೆಲ ಕಡೆ ಪೂರ್ವ ಮುಂಗಾರು ಆರಂಭವಾಗಿದ್ದು, ಮುಂಗಾರು ಸಹಜವಾಗಿ ಆದರೆ ನದಿ ಕೆರೆಗಳಲ್ಲಿ ಸಾಕಷ್ಟು ನೀರು ತುಂಬುವ ನಿರೀಕ್ಷೆ ಇದೆ. ಕಳೆದ ಬಾರಿಗಿಂತ ಈ ಬಾರಿ ತಡವಾಗಿ ಆರಂಭವಾಗಲಿರುವ ಮುಂಗಾರು ಜೂನ್ 6ರಂದು ರಾಜ್ಯದಲ್ಲಿ ಸಿಂಚನ ತರುವ ನಿರೀಕ್ಷೆ ಇದೆ.

ಧರ್ಮಸ್ಥಳದಲ್ಲಿ ಕಳೆದ ವರ್ಷವೂ ಈ ಅವಧಿಯಲ್ಲಿ ನೀರಿಗೆ ತತ್ವಾರವಿತ್ತು. ಆದರೆ, ನಿಯಮಿತ ನೀರಿನ ಬಳಕೆಯೊಂದಿಗೆ ಧರ್ಮಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮುಂಗಾರು ಮಳೆ ಕೂಡ ತುಸು ಬೇಗ ಬಂದು ದೊಡ್ಡ ಅನಾಹುತವನ್ನು ತಪ್ಪಿಸಿತ್ತು. ಆದರೆ, ಈ ವರ್ಷ ನೇತ್ರಾವತಿಗೆ ಕಟ್ಟಿರುವ ಅಣೆಕಟ್ಟಿನಲ್ಲಿ ಕೇವಲ 20-22 ದಿನಗಳಿಗೆ ಆಗುವಷ್ಟು ಮಾತ್ರ ನೀರು ಲಭ್ಯವಿದೆ. ಮುಂಗಾರು ಇನ್ನೂ ಪ್ರವೇಶ ಆಗಿಲ್ಲದಿರುವುದರಿಂದ ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೆ ತೊಂದರೆ ಆಗಬಹುದು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ಕ್ಷೇತ್ರಕ್ಕೆ ಬರುವುದನ್ನು ತಪ್ಪಿಸಬೇಕೆಂಬುದು ಧರ್ಮಾಧಿಕಾರಿಗಳ ಕೋರಿಕೆಯಾಗಿದೆ.

ಈ ವರ್ಷದ ಬೇಸಿಗೆ ಅತ್ಯಂತ ಭೀಕರವಾಗಿದ್ದು, ದೇಶಾದ್ಯಂತ ಬಹುತೇಕ ರಾಜ್ಯಗಳ ಜನರು ಬಿಸಿಲಿಗೆ ನಲುಗಿ ಹೋಗಿದ್ದಾರೆ. ರಾಜ್ಯದ ಮುಕ್ಕಾಲು ಪಾಲಿಗಿಂತ ಹೆಚ್ಚು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಬಂದಿದೆ. ಅಂತರ್ಜಲವಂತೂ ಬಹುತೇಕ ಪ್ರಪಾತಕ್ಕೆ ಕುಸಿದಿದೆ. ಪ್ರತೀ ತಾಲೂಕುಗಳಲ್ಲೂ ಬೆರಳೆಣಿಕೆಯ ಬೋರ್​ವೆಲ್​ಗಳು ಜೀವಂತವಾಗಿವೆ.

ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಈ ಬಾರಿ ಮಳೆ ಮಾಮೂಲಿಗಿಂತ ತುಸು ಕಡಿಮೆ ಪ್ರಮಾಣದಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತರ ಎದೆ ನಡುಗಿಸಿದೆ.

Comments are closed.