ಬಳ್ಳಾರಿ: ಕೈಯಲ್ಲಿ ನೀರಿನ ಬಾಟಲು, ತಲೆ ಮೇಲೊಂದು ಟೋಪಿ ಹಾಕ್ಕೊಂಡು ನಿಗಿ ನಿಗಿ ಕೆಂಡದಂತಹ ಬಿಸಿಲಿನಲ್ಲಿ ಬೆಟ್ಟ ಹತ್ತುತ್ತಿರೋ ಮಕ್ಕಳನ್ನ ನೋಡಿದ್ರೆ ಅವರು ಆಟ ಆಡೋಕೆ ಹೋಗುತ್ತಿರುಬಹುದು ಎಂದನಿಸುತ್ತೆ. ಆದರೆ, ಬಳ್ಳಾರಿಯ ಏಳೆಂಟು ವರ್ಷಗಳ ಪ್ರಾಯದ ಈ ಮಕ್ಕಳ ವಿಚಾರದಲ್ಲಿ ಹಾಗಿಲ್ಲ. ಅಷ್ಟಕ್ಕೂ ಈ ಮಕ್ಕಳು ಮಾಡ್ತಾಯಿರೋದು ಮಾನವನಿಗೆ ಮುಖ್ಯವಾಗಿ ಬೇಕಿರುವ ಮಾನವೀಯ ಕೆಲಸವನ್ನ.
ಭೀಕರ ಬರ ಮತ್ತು ಮಳೆಯ ಕೊರತೆಯಿಂದಾಗಿ ಹಾಗೂ ಕಿಡಿಗೇಡಿಗಳು ಕಾಡಿಗೆ ಇಡುತ್ತಿರುವ ಬೆಂಕಿಯಿಂದ ವನ್ಯಜೀವಿಗಳು ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನು ಆಹಾರ, ನೀರು ಅರಸಿ ಪಕ್ಷಿಗಳು ದೂರವೇ ಸಾಗಬೇಕಿದೆ. ಈ ಹಿನ್ನೆಲೆಯಲ್ಲಿ ಹೂವಿನಹಡಗಲಿ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಪೋರರು ಮಾತ್ರ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಈ ಮಕ್ಕಳು ಕಾಡಿಗೆ ತೆರಳಿ ಪ್ರಾಣಿ ಪಕ್ಷಿಗಳಿಗೆ ಸಹಾಯವಾಗಲಿ ಎಂದು ನೀರುಣಿಸುವ ಕೆಲಸ ಮಾಡ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲೀಗ ಬಿಸಿಲಿನ ತಾಪ ತಾರಕಕ್ಕೇರಿದೆ. ಮನೆಯಿಂದ ಆಚೆ ಬರಲಾಗದಷ್ಟು ಬಿಸಿಲ ಧಗೆ ಸುಡುತ್ತಿದೆ. ಆದ್ರೆ ಭಾನುವಾರ ರಜೆಯ ಮಜೆ ಅನುಭವಿಸಬೇಕಿದ್ದ ಈ ಮಕ್ಕಳು, ಊರಿನ ಪಕ್ಕದಲ್ಲಿಯೇ ಇರುವ ಬೆಟ್ಟಹತ್ತಿ ಹಕ್ಕಿಗಳಿಗೆ ನೀರಿಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಮನೆಯಲ್ಲಿ ನಿಷ್ಕ್ರಿಯವಾಗಿ ಬಿದ್ದಿದ್ದ ತೆಂಗಿನ ಚಿಪ್ಪುಗಳನ್ನು ಕ್ರೂಡೀಕರಿಸಿ, ಚಿಪ್ಪನ್ನ ಅಲ್ಲಲ್ಲಿ ಇಟ್ಟು ನೀರು ತುಂಬಿಸಿ ಬರುತ್ತಾರೆ. ಹೀಗೆ ವಾರದಲ್ಲಿ ಎರಡು ಮೂರು ಬಾರಿ ಹೋಗಿ ಚಿಪ್ಪಿನ ತುಂಬಾ ನೀರು ಹಾಕಿ ಬರುತ್ತಾರೆ.
ಸಾಮಾನ್ಯವಾಗಿ ಭಾನುವಾರ ಬಂದ್ರೆ ಸಾಕು ಈಗಿನ ಮಕ್ಕಳು ಚಿಂಟು ಟಿವಿ, ಮೊಬೈಲ್ ಗೇಮ್, ಕ್ರಿಕೆಟ್ ಅಂತಾ ಟೈಂ ಪಾಸ್ ಮಾಡ್ತಾರೆ, ಇನ್ನೂ ಕೆಲವು ಮಕ್ಕಳನ್ನಂತೂ ಪೋಷಕರೇ ಬಿಸಿಲಿಗೆ ಬಿಡುವುದಿಲ್ಲ. ಆಟಪಾಠದಲ್ಲೇ ಮುಳುಗಿ ಹೋಗುವ ಇವತ್ತಿನ ಮಕ್ಕಳಲ್ಲಿ ಇಂಥದ್ದೊಂದು ಪ್ರಕೃತಿ ಕಾಳಜಿ ಇರುವುದು ಅಮೋಘ ಅನಿಸುತ್ತದೆ. ಈ ಗಣಿನಾಡಪೋರರು ಬೆಟ್ಟದಲ್ಲಿನ ವನ್ಯಜೀವಿಗಳಿಗೆ ನೆರವಾಗುವ ಮೂಲಕ ರಜೆಯನ್ನು ಹೀಗೂ ಎಂಜಾಯ್ ಮಾಡಬಹುದು ಎಂದು ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ. ಇನ್ನೊಂದು ವಿಶೇಷ ಅಂದರೆ, ಇವರೆಲ್ಲರೂ ಸರ್ಕಾರಿ ಶಾಲೆ ಮಕ್ಕಳು ಎಂಬುದು.