ನವದೆಹಲಿ: ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಈ ಬಾರಿಯೂ ಕೂಡ ಬಿಜೆಪಿ ಸ್ಪಷ್ಟ ಬಹುಮತ ಪಡೆದು, ಎನ್ಡಿಎ ಮೈತ್ರಿಕೂಟದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಗೆಲುವಿನ ವಿಶ್ವಾಸ ಪ್ರಕಟಿಸಿದರು.
ಎಐಸಿಸಿ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಾಧ್ಯಮದವರು ನನಗೆ ಮಾತ್ರ ಕಠಿಣವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಮತ್ತು ಮೋದಿಗೆ ಬಟ್ಟೆ ಮತ್ತು ಮಾವಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತೀರಾ ಎಂದು ಸುದ್ದಿಗಾರರಿಗೆ ಹೇಳಿದರು.
ನರೇಂದ್ರ ಮೋದಿ ಮತ್ತು ಬಿಜೆಪಿ ಬಳಿ ಹೇರಳ ಹಣವಿದೆ ಮತ್ತು ಯಥೇಚ್ಚವಾಗಿ ಮಾರುಕಟ್ಟೆಯೂ ಇದೆ. ಅದು ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದೆ. ಎಷ್ಟು ಪ್ರಮಾಣದಲ್ಲಿ ಅಂದರೆ 1:20ರ ಅನುಪಾತದಲ್ಲಿ ಇದೆ. ನಮ್ಮ ಬಳಿ ಇರುವುದು ಸತ್ಯ ಮಾತ್ರ. ಮತ್ತು ಸತ್ಯ ಮಾತ್ರವೇ ಗೆಲ್ಲುವುದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ನಾನು ಪ್ರಧಾನಿ ಮೋದಿ ಅವರನ್ನು ಕೇಳಬಯಸುತ್ತೇನೆ, ಅವರು ಏಕೆ ನನ್ನೊಂದಿಗೆ ಚರ್ಚೆ ಮಾಡಲು ಬರುತ್ತಿಲ್ಲ. ರಫೇಲ್ ಮೇಲಿನ ಚರ್ಚೆಯ ಸವಾಲಿಗೆ ನೀವು ಪ್ರತಿಕ್ರಿಯೆ ನೀಡುವುದಿಲ್ಲ ಎಂಬುದು ನನಗೆ ಗೊತ್ತು ಎಂದು ಮೋದಿ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಇದ್ದರು.
Comments are closed.