ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯ ಮುಖಂಡ ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ್ ಇವತ್ತು ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 66 ವರ್ಷದ ಸಂಭಾಜಿ ಅವರು ಇಂದು ಶುಕ್ರವಾರ ರಾತ್ರಿ 8:45ರ ಸುಮಾರಿನಲ್ಲಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ಸಂಭಾಜಿ ಪಾಟೀಲ್ ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ನಾಲ್ಕು ಬಾರಿ ಮೇಯರ್ ಆಗಿ ಕೆಲಸ ಮಾಡಿದ್ದರು. ನಾಲ್ಕು ಬಾರಿ ಮೇಯರ್ ಆದ ದೇಶದ ಮೊದಲ ವ್ಯಕ್ತಿ ಎಂಬ ದಾಖಲೆ ಅವರ ಹೆಸರಲ್ಲೇ ಇದೆ. 1990, 1992, 1999 ಮತ್ತು 2003ರಲ್ಲಿ ಅವರು ಬೆಳಗಾವಿ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದರು.
ಮಾಜಿ ಮುಖ್ಯಮಂತ್ರಿ ದಿ| ಎಸ್. ಬಂಗಾರಪ್ಪ ಅವರೊಂದಿಗೆ ಉತ್ತಮ ನಂಟು ಹೊಂದಿದ್ದ ಸಂಭಾಜಿ, ಅವರ ಮೂಲಕ ಹಿಡಕಲ್ ಜಲಾನಯನ ಯೋಜನೆಯಿಂದ ಬೆಳಗಾವಿ ಜನರ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದ್ದರು.
ಕರ್ನಾಟಕ ವಿರೋಧಿ ಧೋರಣೆ ಇರುವ ಎಂಇಎಸ್ ಪಕ್ಷದಲ್ಲಿದ್ದರೂ ಸಂಭಾಜಿ ಅವರದ್ದು ಭಿನ್ನ ವ್ಯಕ್ತಿತ್ವವಾಗಿತ್ತು. ಎಷ್ಟೋ ವಿಚಾರಗಳಲ್ಲಿ ಅವರು ಎಂಇಎಸ್ನೊಳಗೆ ವಿರೋಧ ಕಟ್ಟಿಕೊಂಡಿದ್ದರು. ಪಕ್ಷಕ್ಕಿಂತ ಅವರಿಗೆ ಬೆಳಗಾವಿಯ ಅಭ್ಯುದಯ ಮುಖ್ಯವಾಗಿತ್ತು.
ಇತ್ತೀಚೆಗೆ ಅವರು ಮುಂಬೈ ಗ್ಯಾಂಗ್ಸ್ಟರ್ ರವಿ ಪೂಜಾರಿ ಅವರಿಂದ ತಮಗೆ ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿಕೊಂಡಿದ್ದರು.