ರಾಷ್ಟ್ರೀಯ

ಐದು ವರ್ಷಗಳ ನಂತರ ಮೋದಿಯಿಂದ ಪ್ರಥಮ ಪತ್ರಿಕಾಗೋಷ್ಠಿ

Pinterest LinkedIn Tumblr


ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕಡೆಯ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶವೆಂದರೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಸುತ್ತಿರುವ ಮೊದಲ ಬಾರಿಗೆ ಬಹಿರಂಗ ಪತ್ರಿಕಾಗೋಷ್ಠಿ ಇದಾಗಿದೆ.

ಅಮಿತ್​ ಶಾ ಮಾತಿನ ನಂತರ ಮಾತನಾಡಿದ ಪ್ರಧಾನಿ ಮೋದಿ, ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. “ಭಾರತ ದೇಶದ ಚುನಾವಣಾ ಇತಿಹಾಸದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಐದು ವರ್ಷಗಳ ನಂತರ ಮತ್ತೆ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಯಾವ ಸರ್ಕಾರವೂ ಬಂದಿಲ್ಲ. ಜತೆಗೆ ದೇಶದಲ್ಲಿ ಈವರೆಗೆ ಬಂದಿರುವ ಬಹುತೇಕ ಪ್ರಧಾನಿಗಳು ವಂಶಪಾರಂಪರ್ಯವಾಗಿ ಬಂದಿದ್ದಾರೆ. ಅಥವಾ ಮೈತ್ರಿ ಪಕ್ಷಗಳು ಅಧಿಕಾರ ಹಿಡಿದಿವೆ ಮತ್ತು ಎರಡು ವರ್ಷ, ಒಂದು ವರ್ಷ ಹೀಗೇ ಬೇರೆ ಬೇರೆ ಅವಧಿಗೆ ಪ್ರಧಾನಿ ಸ್ಥಾನಕ್ಕೇರಿದ್ದಾರೆ. ಆದರೆ ಮೊದಲ ಬಾರಿಗೆ 2014ರಲ್ಲಿ ಭಾರತೀಯರು ಮೊದಲ ಬಾರಿಗೆ ಜನರ ನಡುವಿನಿಂದಲೇ ಬಂದ ನನ್ನನ್ನು ಅಧಿಕಾರಕ್ಕೆ ತಂದರು. ಅದೇ ಅವಕಾಶ ಈಗ ಮತ್ತೆ 2019ರಲ್ಲೂ ಬಂದಿದೆ. ನಾವು ಈ ಬಾರಿಯೂ ಅಧಿಕಾರಕ್ಕೆ ಬರುತ್ತೇವೆ,” ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಜತೆಗೆ ಭಾರತ ದೇಶದ ವಿವಿಧತೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಪ್ರಪಂಚದ ಮುಂದೆ ಭಾರತ ದೇಶದ ಶಕ್ತಿಯನ್ನು ತೋರಿಸಬೇಕು ಮತ್ತು ನಿರೂಪಿಸಬೇಕು ಎಂದರು. “ಹಿಂದೆ ಚುನಾವಣೆ ಬಂತೆಂದರೆ ಐಪಿಎಲ್​ ಪಂದ್ಯಾವಳಿಯನ್ನೇ ಭಾರತದಿಂದ ಬೇರೆ ದೇಶಕ್ಕೆ ಕಳಿಸಲಾಗಿತ್ತು. ಆದರೆ ಈಗ ಒಂದೆಡೆ ಐಪಿಎಲ್​, ಮಕ್ಕಳ ಪರೀಕ್ಷೆಗಳು, ವಿಧಾನಸಭಾ ಚುನಾವಣೆಗಳು, ಉಪ ಚುನಾವಣೆಗಳು ಸೇರಿದಂತೆ ಹಲವು ಚಟುವಟಿಕೆಗಳು ದೇಶದಲ್ಲಿ ಒಟ್ಟಿಗೇ ನಡೆಯುತ್ತಿವೆ. ಇದು ನಮ್ಮ ಸರ್ಕಾರದಿಂದ ಆಗಿದ್ದು ಎಂದು ನಾನು ಹೇಳುವುದಿಲ್ಲ. ಇದು ಭಾರತದ ದೇಶದ ತಾಕತ್ತು ಮತ್ತು ಇದನ್ನು ನಾವು ಹೆಮ್ಮೆಯಿಂದ ಪ್ರಪಂಚಕ್ಕೆ ತೋರಿಸುತ್ತಿದ್ದೇವೆ,” ಎಂದರು.

Comments are closed.