ಕರ್ನಾಟಕ

ಲೋಕಸಭಾ ಚುನಾವಣೆ ಮುಗಿದ ಮೇಲೆ ವಿದ್ಯುತ್​, ನೀರಿನ ವೆಚ್ಚದ ಬೆಲೆ ಏರಿಕೆ

Pinterest LinkedIn Tumblr


ಬೆಂಗಳೂರು; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನರ ಮೇಲೆ ಬೆಲೆ ಏರಿಕೆ ಬಿಸಿ ತಾಗಿಸಲು ಸರ್ಕಾರ ಸಿದ್ದವಾಗಿದೆ. ಕುಡಿಯುವ ನೀರಿನ ದರ ಏರಿಸುವ ಮೂಲಕ ಬೆಂಗಳೂರಿನ ಜನರಿಗೆ ಶಾಕ್ ನೀಡುವ ಸೂಚನೆಯನ್ನು ಈ ಮುಂಚೆಯೇ ನೀಡಿದ್ದ ಸರ್ಕಾರ ಇದೀಗ ವಿದ್ಯುತ್​ ದರದಲ್ಲೂ ಏರಿಕೆ ಮಾಡುವ ಮೂಲಕ ಎಲ್ಲರ ಜೇಬಿಗೂ ಕತ್ತರಿ ಹಾಕಲು ಮುಂದಾಗಿದೆ.

ಈಗಾಗಲೇ ಬೆಲೆ ಏರಿಕೆ ಪ್ರಮಾಣದ ಕುರಿತು ವಿದ್ಯುತ್ ಇಲಾಖೆ ಹಾಗೂ ಬೆಂಗಳೂರು ಜಲ ಮಂಡಳಿ(ಬಿಡಬ್ಲ್ಯೂಎಸ್​ಎಸ್​ಬಿ) ಕಳೆದ ಜನವರಿ-ಫೆಬ್ರವರಿ ತಿಂಗಳಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಚುನಾವಣೆ ಇದ್ದ ಕಾರಣ ಸರ್ಕಾರ ಬೆಲೆ ಏರಿಕೆ ಮಾಡಲು ಮುಂದಾಗಿರಲಿಲ್ಲ. ಆದರೆ, ಗುರುವಾರ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇಂಧನ ಹಾಗೂ ಜಲಮಂಡಳಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಮೇ.23ರ ಫಲಿತಾಂಶದ ನಂತರ ಬೆಲೆ ಏರಿಸಲು ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಶೇ.20 ರಿಂದ 70 ರಷ್ಟು ಏರಲಿದೆ ನೀರಿದ ದರ : ಬೆಂಗಳೂರು ಜಲ ಮಂಡಳಿ ಅಕ್ಷರಶಃ ಸಾಲದ ಹೊರೆಗೆ ಸಿಲುಕಿದೆ. ವಿದ್ಯುತ್ ಸೇರಿದಂತೆ ಅನೇಕ ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗದೆ ಮಂಡಳಿ ತಿಣುಕಾಡುತ್ತಿದೆ.

ಒಂದು ದಶಲಕ್ಷ ಲೀಟರ್ ನೀರನ್ನು ಪಂಪ್​ ಮಾಡಲು 9,400 ರೂ ವಿದ್ಯುತ್​ ಖರ್ಚಾಗುತ್ತದೆ. ಹೀಗೆ ಬೆಂಗಳೂರಿನಲ್ಲಿ ಪ್ರತಿವರ್ಷ ಸುಮಾರು 50 ಕೋಟಿ ರೂ. ವಿದ್ಯುತ್​ಗೆ ವೆಚ್ಚವಾಗುತ್ತದೆ. ಹೀಗಾಗಿ ಎಲ್ಲಾ ವೆಚ್ಚಗಳನ್ನು ಸರಿದೂಗಿಸಲು ನೀರಿನ ದರ ಏರಿಸಬೇಕು ಎಂದು ಈ ಹಿಂದೆಯೇ ನಗರಾಭಿವೃದ್ಧಿ ಇಲಾಖೆಗೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು.

2008 ಹಾಗೂ 2014ರಲ್ಲೂ ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀರಿನ ದರವನ್ನು ಶೇ.270 ರಷ್ಟು ಏರಿಕೆ ಮಾಡುವ ಮೂಲಕ ಜನರಿಗೆ ಆಘಾತ ನೀಡಿತ್ತು.

ನೀರಿನ ಬಿಲ್​ಗಳೇ ಮಂಡಳಿಯ ಪ್ರಮುಖ ಆದಾಯದ ಮೂಲ. ಒಳಚರಂಡಿಗಳ ಜಾಲ ನಿರ್ಮಾಣ, ಕೊಳವೆ ಬಾವಿಗಳ ನಿರ್ವಹಣೆ, ವಿದ್ಯುತ್​ ದರ ಸೇರಿದಂತೆ ಮಂಡಳಿಯ ಕಾರ್ಯಭಾರ ವೆಚ್ಚಗಳ ಪಟ್ಟಿ ದೊಡ್ಡದೇ ಇದೆ. ಇದಲ್ಲದೆ ವಿವಿಧ ಯೋಜನೆಗಳಿಗಾಗಿ ಮಂಡಳಿ ಅಂದಾಜು 1600 ಕೋಟಿ ಸಾಲ ಪಡೆದಿದೆ. ಅದರ ಅಸಲು ಹಾಗೂ ಬಡ್ಡಿ ಪಾವತಿಗೆ ಹಣದ ಅವಶ್ಯಕತೆ ಇದೆ. 7 ಸಾವಿರ ಕೊಳವೆ ಬಾವಿಗಳ ನಿರ್ವಹಣೆಗೂ ಹಣದ ಅವಶ್ಯಕತೆ ಇದೆ. ಆದರೆ ಮಂಡಳಿಯ ಪ್ರತಿ ತಿಂಗಳ ಆದಾಯ ಕೇವಲ 90 ಕೋಟಿ ರೂ ಮಾತ್ರ. ಹೀಗಾಗಿ ದರ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ನೀರಿನ ದರವನ್ನು ಶೇ.20 ರಿಂದ 70 ರಷ್ಟು ಏರಿಸುವ ಸಾಧ್ಯತೆ ಇದ್ದು ಪರಿಷ್ಕೃತ ದರ ಪಟ್ಟಿ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಅನ್ವಯವಾಗುವ ಸಾಧ್ಯತೆ ಇದೆ.

ಪ್ರಸ್ತುತ ನೀರಿನ ದರ:

ಮನೆಗಳಿಗೆ 8000 ಲೀಟರ್​ವರೆಗೆ ಪ್ರತಿ ಸಾವಿರ ಲೀಟರ್​ಗೆ 7 ರೂ.
8000-25000 ಲೀಟರ್​ ವರೆಗೆ ಪ್ರತಿ ಸಾವಿರ ಲೀಟರ್​ಗೆ 11 ರೂ
25000-50000 ಲೀಟರ್​ವರೆಗೆ ಪ್ರತಿ ಸಾವಿರ ಲೀಟರ್​ಗೆ 26 ರೂ

ಶಾಕ್ ನೀಡಲು ಸಿದ್ದವಾದ ವಿದ್ಯುತ್​ ದರ:

ನೀರಿನ ದರ ಏರಿಸಿ ಬೆಂಗಳೂರು ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ಸರ್ಕಾರ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯದ ಎಲ್ಲಾ ಜನತೆಗೂ ಶಾಕ್ ನೀಡಲು ಮುಂದಾಗಿದೆ.

ಪ್ರಸ್ತುತ ಮೆಸ್ಕಾಂಗೆ 2019-20ರ ಸಾಲಿನಲ್ಲಿ 4,153.51 ಕೋಟಿ ಅವಶ್ಯಕತೆ ಇದೆ. ಆದರೆ 3,447 ಕೋಟಿ ರೂ ಮಾತ್ರ ಆದಾಯದ ರೂಪದಲ್ಲಿ ಸಂಗ್ರಹವಾಗುತ್ತಿದೆ. ಹೀಗಾಗಿ ವಿದ್ಯುತ್​ ಮಂಡಳಿ ಅಂದಾಜು 641 ಕೋಟಿ ರೂ. ಗಳ ನಿವ್ವಳ ನಷ್ಟ ಅನುಭವಿಸುತ್ತಿದೆ. ಈ ಕೊರತೆಯನ್ನು ಜನರ ಮೇಲೆ ಹೊರಿಸುವ ಲೆಕ್ಕಾಚಾರ ಮೆಸ್ಕಾಂನದ್ದು.

ಇಂದು ನಡೆದ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಯೂನಿಟ್​ಗೆ 1.38 ರೂ ಏರಿಕೆ ಮಾಡುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮೆಸ್ಕಾಂ ದರ ಏರಿಕೆ ಖಾಯಂ ವಿಚಾರವಾಗಿದ್ದು, ಪ್ರತಿ ವರ್ಷ ಏರಿಕೆ ಬೆಲೆ ಏರುತ್ತಲೆ ಇದೆ. ಕಳೆದ ವರ್ಷವೂ ಇಲಾಖೆ ಯೂನಿಟ್​ಗೆ 1.51 ರೂ ಏರಿಕೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ 58 ಪೈಸೆ ಏರಿಕೆಗೆ ಮಾತ್ರ ಅನುಮತಿ ನೀಡಿತ್ತು. ಹೀಗಾಗಿ ಈವರ್ಷವೂ ಯೂನಿಟ್​ಗೆ ಕನಿಷ್ಟ 80 ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇಂದಿನ ಸಭೆಯಲ್ಲಿ ನೀರು ಹಾಗೂ ವಿದ್ಯುತ್ ಎರಡರ ದರದ ಕುರಿತು ಚರ್ಚೆ ನಡೆಸಲಾಗಿದ್ದು ಬಹುತೇಕ ಲೋಕಸಭೆ ಫಲಿತಾಂಶದ ನಂತರ ಈ ಹೊಸ ದರಪಟ್ಟಿ ಅಧಿಕೃತವಾಗಿ ಬಹಿರಂಗವಾಗಲಿದೆ. ಆದರೆ, ಇದು ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿರುವುದಂತೂ ದಿಟ.

Comments are closed.