ಹುಬ್ಬಳ್ಳಿ: ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಖಡಕ್ ಸಂದೇಶ ರವಾನಿಸಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಶೋಭಾ ಕರಂದ್ಲಾಜೆ ಹೊಂದಿದ್ದಾರೆ ಎಂಬರ್ಥದಲ್ಲಿ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ಒಂದಾದ ಮೇಲೊಂದರಂತೆ ಟ್ವಿಟ್ಟರ್ ಅಸ್ತ್ರ ಪ್ರಯೋಗಿಸುತ್ತಿರುವ ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಅವರ ಹೇಳಿಕೆಯ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಸಾಮಾಜಿಕವಾಗಿ ಚರ್ಚೆ ಆರಂಭವಾಗಿದೆ.
“ಕುಮಾರಿ ಶೋಭಾ ಅವರೇ, ಓರ್ವ ಹೆಣ್ಣಾಗಿ ತಾವು ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಚೆನ್ನಮ್ಮ, ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೆ ಸಾಧನೆಯ ಉತ್ತುಂಗಕ್ಕೇರಿದವರು,”ಎಂದು ಟ್ವೀಟ್ ಮಾಡುವ ಮೂಲಕ ಶೋಭಾ ಅವರ ಹೇಳಿಕೆಯನ್ನು ನಾಜೂಕಾಗಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಕುಂದಗೋಳ ಉಪಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯರನ್ನು ಟೀಕಿಸಿದ್ದ ಶೋಭಾ ಕರಂದ್ಲಾಜೆ, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಅವರು ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದರು.
ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಎಲ್ಲಿ ಸಿದ್ದರಾಮಯ್ಯ ಎಲ್ಲಿ. ಅರಸು ಅವರಿಗೆ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಮೊದಲು ಅವರು ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ತಮ್ಮ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲಾಗಲಿಲ್ಲ ಎಂದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಮಾಜಿ ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ನಾಲಿಗೆ ಹರಿಬಿಟ್ಟಿದ್ದರು.
ಇಂದು ಬೆಳಗ್ಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರ ಹೇಳಿಕೆಗೆ ತಕ್ಕ ಉತ್ತರ ನೀಡುವ ಮೂಲಕ ಸದ್ದು ಮಾಡಿದ್ದ ಸಿದ್ದರಾಮಯ್ಯ ಟ್ವಿಟ್ಟರ್ ಖಾತೆ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಹಳ ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು, ಆದರೆ ಅವಕಾಶ ವಂಚಿತರಾದರು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ಖರ್ಗೆ ಅವರಿಗೆ ಅದಕ್ಕಿಂತಲೂ ದೊಡ್ಡ ಸ್ಥಾನವನ್ನು ಅಲಂಕರಿಸುವ ಘನತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಹಲವರು ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಎಚ್. ಡಿ. ರೇವಣ್ಣ ಕೂಡ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ, ಆದರೆ ಸೂಕ್ತ ಸಮಯ ಬರಬೇಕಷ್ಟೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.
ಅದರ ಬೆನ್ನಲ್ಲೇ ಕುಮಾರಸ್ವಾಮಿ ಮತ್ತೆ ಟ್ವೀಟ್ ಮಾಡಿ, ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂಬ ಮಾತನ್ನು ರಾಜಕೀಯವಾಗಿ ಬಳಸದಂತೆ ಮನವಿ ಮಾಡಿದ್ದರು.