ಕರ್ನಾಟಕ

ಲಿಂಗಾಯತರು ಕಾಂಗ್ರೆಸ್​ಗೆ ಮತ ಹಾಕಿದರೆ ಅಪರಾಧ ಹೇಳಿಕೆ: ಯಡಿಯೂರಪ್ಪ ವಿರುದ್ದ ದೂರು

Pinterest LinkedIn Tumblr


ಬೆಂಗಳೂರು/ಕಲಬುರ್ಗಿ: ಕಾಂಗ್ರೆಸ್​ಗೆ ಲಿಂಗಾಯತರು ಮತನೀಡಿದರೆ ಅಪರಾಧ ಮಾಡಿದಂತೆ ಎನ್ನುವ ಬಿಎಸ್ ವೈ ಹೇಳಿಕೆಯ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಂದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶಪೂರಿತ ಹೇಳಿಕೆಯನ್ನ ಯಡಿಯೂರಪ್ಪ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಲಬುರ್ಗಿಯಲ್ಲಿ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಮತ್ತು ಬಹಿರಂಗ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು. ವೀರೇಂದ್ರ ಪಾಟೀಲರಿಗೆ ಅವಮಾನಿಸಿದ ಕಾಂಗ್ರೆಸ್​​​​ ಪಕ್ಷಕ್ಕೆ ಲಿಂಗಾಯಿತರು ಮತ ನೀಡಿದರೆ ಅಪರಾಧ ಮಾಡಿದಂತೆ ಎಂದು ಅವರು ಮಾತನಾಡಿದ್ದರು.

ಯಡಿಯೂರಪ್ಪ ನವರು ತಮ್ಮ ಸ್ಥಾನದ ಘನತೆಯನ್ನು ಮರೆತು ಜಾತಿಯಾಧಾರಿತವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್​​​ ತೀರ್ಪಿನ ಪ್ರಕಾರ ಅವರು ಜನಪ್ರತಿನಿಧಿ ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಉಪಚುನಾವಣೆಯ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಇರುವುದರಿಂದ ಲಿಂಗಾಯತ-ವಿರಶೈವ ಸಮುದಾಯಕ್ಕೆ ಸೇರಿದ ಬಿಎಸ್​​ ಯಡಿಯೂರಪ್ಪ ಅವರು ಆ ಸಮುದಾಯದ ಮತದಾರರ ಮೇಲೆ ಜಾತಯಾಧರಿತವಾಗಿ ಪ್ರಭಾವ ಬೀರಿ ನಿಷ್ಪಕ್ಷಪಾತ ಮತದಾನಕ್ಕೆ ಅಡ್ಡಿಪಡಿಸಿದ್ದಾರೆ. ಹಾಗಾಗಿ ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಚಾರದಿಂದ ನಿರ್ಬಂದಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿಲ್ಲ: ಎಂಬಿ ಪಾಟೀಲ್

ಇನ್ನು, ಕಲಬುರ್ಗಿಯಲ್ಲಿ ನಡೆದ ವೀರಶೈವ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಚಿವ ಎಂ.ಬಿ. ಪಾಟೀಲ್ ಅವರು, ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎನ್ನುವ ಯಡಿಯೂರಪ್ಪ ಅವರ ಹೇಳಿಕೆಯನ್ನು ಬಲವಾಗಿ ತಳ್ಳಿಹಾಕಿದರು.

ಬಿಜೆಪಿ ಬಸವಣ್ಣನವರ ತತ್ವಗಳನ್ನು ವಿರೋಧಿಸುತ್ತಾ ಬಂದ ಪಕ್ಷವಾಗಿದೆ. ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿಲ್ಲ. ಅವರನ್ನು ಸಿಎಂ ಸ್ಥಾನದಿಂದ ಇಳಿಸುವಾಗ ಕೆಲ ಲೋಪದೋಷಗಳಾಗಿವೆ. ಆದರೆ ಯಡಿಯೂರಪ್ಪ ಅವರನ್ನು ಬಿಜೆಪಿ ನಾಯಕರು ಹೇಗೆ ನಡೆಸಿಕೊಂಡರು? ಕೆಜೆಪಿ ಮಾಡಿ, ಬಿಜೆಪಿ ಮತ್ತೆ ಸೇರ್ಪಡೆಗೊಂಡು ಈಗ ಮತ್ತೊಮ್ಮೆ ಸಿಎಂ ಆಗೋ ಮಾತನ್ನು ಯಡಿಯೂರಪ್ಪ ಹೇಳ್ತಿದಾರೆ. ಆದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಕೆಲವೇ ದಿನಗಳಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡೋದು ಖಚಿತ ಎಂದರು.

ಯಡಿಯೂರಪ್ಪ ಒಬ್ಬರು ಅಲ್ಲಿ ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಿದ ಎಂ.ಬಿ. ಪಾಟೀಲ್, ಆರ್.ಎಸ್.ಎಸ್. ಕಛೇರಿಯಲ್ಲಿ ಬಸವ ಜಯಂತಿ ಆಚರಿಸಲಾಯಿತೆ? ಎಂದು ಪ್ರಶ್ನೆ ಮಾಡಿದರು

ಬಿಜೆಪಿಗೆ ಬಂದ ಉಮೇಶ್ ಜಾಧವ್ ಚಿಂಚೋಳಿ ಜನರಿಗೆ ಟೋಪಿ ಹಾಕಿ ಹೋಗಿದ್ದಾರೆ. ಲಿಂಗಾಯತರಾರೂ ನನಗೆ ಮತ ಹಾಕಿಲ್ಲ ಎಂದು ಅವರು ಹೇಳಿದ್ದಾರೆ. ಅಂಥವರಿಗೆ ನೀವು ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದ ಸಚಿವರು, ವೀರೇಂದ್ರ ಪಾಟೀಲ ಪುತ್ರ ಕೈಲಾಶನಾಥ ಪಾಟೀಲರನ್ನು ಮುಂದಿನ ದಿನಗಳಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

Comments are closed.