ಕರ್ನಾಟಕ

ಪ್ರಜ್ವಲ್ ರೇವಣ್ಣಗೆ 6 ವರ್ಷ ನಿರ್ಬಂಧ?

Pinterest LinkedIn Tumblr


ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭವಿಷ್ಯ ಮತ್ತೆ ಅಡಕತ್ತರಿಯಲ್ಲಿ ಸಿಲುಕಿದೆ. ಚುನಾವಣೆಗೆ ಸ್ಪರ್ಧಿಸುವಾಗ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಎ. ಮಂಜು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈಗ ಜಿಲ್ಲಾ ಚುನಾವಣಾಧಿಕಾರಿ ಮತ್ತು ರಾಜ್ಯ ಚುನಾವಣಾಧಿಕಾರಿ ತನಿಖೆ ಸಂಪೂರ್ಣ ಮುಗಿದಿದೆ. ಪ್ರಜ್ವಲ್ ರೇವಣ್ಣ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗವು ಹಾಸನ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ‌.

ಪ್ರಜಾಪ್ರತಿನಿಧಿ ಕಾಯ್ದೆ 125 ಎ ರ ಮತ್ತು 1951 ರ ಅಡಿ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದೆ. ಈ ಕಾಯ್ದೆ ಪ್ರಕಾರ ಪ್ರಜ್ವಲ್ ಅವರಿಗೆ ದಂಡ ವಿಧಿಸಬಹುದು ಅಥವಾ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬಹುದು.

ಈ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಹಾಸನ ಜಿಲ್ಲಾ ಚುನಾವಣಾಧಿಕಾರಿ ಕೈಯಲ್ಲಿದೆ. ಆದ್ರೆ ಬಿಜೆಪಿಯವರು ನಮ್ಮ ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ನ್ಯಾಯ ಸಿಕ್ಕಿದ್ದು, ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಮಾಣ ಪತ್ರ ಸಲ್ಲಿಸುವಾಗ ಬೆಂಗಳೂರು ಮೂಲದ ಕಂಪನಿಗೆ ಹಣ ಹೂಡಿಕೆ ಮಾಡಿದ್ದಾರೆ. ಎಷ್ಟು ಹಣ ಹೂಡಿಕೆ ಮಾಡಿದ್ದಾರೆಂದು ಉಲ್ಲೇಖಿಸಿಲ್ಲ. ದೇವೇಗೌಡ ಎಂಬುವರ ಬಳಿ 26 ಲಕ್ಷ ಹಣವನ್ನ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ. ಒಂದು ಪ್ರಮಾಣ ಪತ್ರದಲ್ಲಿ ಹೆಚ್.ಡಿ. ದೇವೇಗೌಡ ಎಂದಿದೆ. ಮತ್ತೊಂದು ಪ್ರಮಾಣ ಪತ್ರದಲ್ಲಿ ಖಾಲಿ ದೇವೇಗೌಡ ಎಂದಿದೆ. ಇದನ್ನೂ ಕೂಡ ಬಿಜೆಪಿ ಪ್ರಶ್ನಿಸಿದೆ.

ಇನ್ನು, ಹಾಸನ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದು, ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸ್ಪಷ್ಟನೆ ಕೇಳಿದ್ದೇವೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಹಲವು ಆರೋಪ ಮಾಡಿತ್ತು. ಆದ್ರೆ ಈಗ ರಾಜ್ಯ ಚುನಾವಣಾ ಆಯೋಗವು ನಡೆಸಿದ ತನಿಖೆಯು ಒಂದು ಹಂತಕ್ಕೆ ತಲುಪಿದ್ದು, ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಬರೆದಿರುವ ಪತ್ರದಿಂದಾಗಿ ಪ್ರಜ್ವಲ್ ರೇವಣ್ಣ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪತ್ರದ ಪ್ರಕಾರ ಜಿಲ್ಲಾ ಚುನಾವಣಾಧಿಕಾರಿ ಕ್ರಮ ಕೈಗೊಳ್ಳುತ್ತಾರಾ ಅಥವಾ ಯಾವ ನಡೆ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಅವರು ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾದ ಬಳಿಕ ಮಂಜು ಅವರು ಬಿಜೆಪಿ ಟಿಕೆಟ್​​ನಲ್ಲಿ ಸ್ಪರ್ಧಿಸಿದ್ದಾರೆ. ಈಗ ಈ ಕ್ಷೇತ್ರದಲ್ಲಿ ಪ್ರಜ್ವಲ್ ಮತ್ತು ಮಂಜು ನಡುವೆ ನೇರ ಫೈಟ್ ನಡೆದಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಆದರೆ, ಪ್ರಜ್ವಲ್ ಗೆದ್ದರೂ ಜಿಲ್ಲಾಧಿಕಾರಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವರ ಭವಿಷ್ಯ ನಿಂತಿದೆ.

Comments are closed.