ಕರ್ನಾಟಕ

ಸಾಯಂಕಾಲದವರೆಗೆ ನೀರಿಗಾಗಿ ಬಡಿದಾಟ; ರಾತ್ರಿಯೆಲ್ಲ ಕರಡಿ ಕಾಟ!

Pinterest LinkedIn Tumblr

ಬಳ್ಳಾರಿ: ಕುಡಿಯುವ ನೀರಿಗಾಗಿ ಹರಗಿನಡೋಣಿ ಗ್ರಾಮ ಹೈರಾಣಗೊಂಡಿರುವ ಸುದ್ದಿಗಳನ್ನು ಓದಿರುತ್ತೀರಿ. ಈ ನತದೃಷ್ಟ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆಯವರೆಗೆ ನೀರಿಗಾಗಿ ಯುದ್ಧ ಮಾಡಿದರೆ, ಸಂಜೆಯ ನಂತರ ಬೇರೊಂದು ಸಮಸ್ಯೆಗೆ ಸಿಲುಕಿದ್ದಾರೆ. ಯಾಕಾದ್ರೂ ಸಂಜೆಯಾಗುತ್ತದೆಯೋ ಎಂದು ಕಳೆದೊಂದು ವಾರದಿಂದ ಗ್ರಾಮಸ್ಥರು ಭಯದಲ್ಲಿ ಕಾಲಕಳೆಯುತ್ತಿದ್ದಾರೆ. ಯಾಕೆಂದರೆ ರಾತ್ರಿಯಾಯಿತಂದರೆ ಸಾಕು ಗ್ರಾಮದೊಳಗೆ ಕರಡಿಗಳು ಕಾಲಿಡುತ್ತವೆ. ನಿನ್ನೆ ಗ್ರಾಮದೊಳಗೆ ಉಗ್ರಪ್ಪ ಮಠದೊಳಗೆ ಬಂದ ದೊಡ್ಡದಾದ ಕರಡಿಯೊಂದು ಅಲ್ಲಿದ್ದ ಎಣ್ಣೆ ತಿಂದು ಓಡಾಡಿದೆ. ಅದನ್ನು ನೋಡಿದ ಸ್ಥಳೀಯರು ಹೆದರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದನ್ನು ಗಮನಿಸಿ ಗ್ರಾಮಸ್ಥರೆಲ್ಲ ಸೇರಿಸಿ ಪಟಾಕಿ ಹಚ್ಚಿ ಗಲಾಟೆ ಮಾಡಿ ಕರಡಿಯನ್ನು ಓಡಿಸಿದ್ದಾರೆ. ಇದೇ ರೀತಿ ಕಳೆದೊಂದು ವಾರದಿಂದ ಕರಡಿಗಳು ದಿನನಿತ್ಯ ರಾತ್ರಿ ವೇಳೆ ಹರಗಿನಡೋಣಿ ಗ್ರಾಮದಲ್ಲಿ ದಾಳಿ ಮಾಡುತ್ತಿವೆ. ಇದು ಗ್ರಾಮಸ್ಥರನ್ನು ಇನ್ನಷ್ಟು ಕಂಗೆಡಿಸಿದೆ.

ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಕೇವಲ 20 ಕಿಲೋಮೀಟರ್ ಹತ್ತಿರದಲ್ಲಿರುವ ಹರಗಿನಡೋಣಿ ಗ್ರಾಮದಲ್ಲಿ ನಾಲ್ಕು ಸಾವಿರ ಜನಸಂಖ್ಯೆಯಿದೆ. ಆಸುಪಾಸು ಒಂದು ಸಾವಿರ ಮನೆಗಳಿವೆ. ಇಂಥ ಗ್ರಾಮದಲ್ಲಿ ಕೆರೆಯೂ ಇಲ್ಲ, ಅಂರ್ಜಲವೂ ಇಲ್ಲದೆ ನೀರಿಲ್ಲದೆ ಜನರು ಪ್ಲಾಸ್ಟಿಕ್ ಪ್ಲೇಟ್ ಬಳಸುವ ಪರಿಸ್ಥಿತಿಯಿದೆ. ಟ್ಯಾಂಕರ್ ನೀರಿಗೆ ಬಡಿದಾಟವಾಡಿದ್ರೆ, ಜಡೆ ಜಗಳವಾದ್ರೆ ನೀರು ಸಿಗುತ್ತದೆ. ಹನಿ ನೀರಿಗಾಗಿ ತತ್ವಾರ ಅನುಭವಿಸುತ್ತಿರುವ ಇಂಥ ಗ್ರಾಮದಲ್ಲಿ ಇದೀಗ ನೀರಿನ ಜೊತೆ ಕರಡಿಗಳ ಕಾಟ ಗ್ರಾಮಸ್ಥರನ್ನು ಇನ್ನಷ್ಟು ಕಂಗೆಡಿಸಿದೆ. ಈ ಮೊದಲು ಕರಡಿ, ಚಿರತೆ ಕಾಣಿಸಿಕೊಳ್ಳುತ್ತಿದ್ದವಾದರೂ ದಾಳಿ ಮಾಡುತ್ತಿದ್ದಿಲ್ಲ. ಆದರೆ ಇದೀಗ ಕರಡಿಗಳು ಗ್ರಾಮದೊಳಗೆ ನುಗ್ಗುತ್ತಿರುವುದು ಜನತೆಯನ್ನು ನಿದ್ರೆ ಮಾಡದಂತೆ ಮಾಡಿದೆ.

ಹರಗಿನಡೋಣಿ ಗ್ರಾಮದ ಪಕ್ಕದಲ್ಲಿರುವ ಗುಡ್ಡದಲ್ಲಿಯೂ ಆಹಾರ ಸಿಗುತ್ತಿಲ್ಲ. ನೀರಿನ ಅಭಾವವಿರುವುದರಿಂದ ಆಹಾರ ಅರಿಸಿ ಕರಡಿಗಳು ರಾತ್ರಿ ಗ್ರಾಮಕ್ಕೆ ದಾಳಿಯಿಡುತ್ತಿವೆ. ಆದಷ್ಟು ಬೇಗನೇ ಬೋನಿಗೆ ಹಾಕಿ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಗುಡ್ಡದಲ್ಲಿ ಕರಡಿಗಳು ಮಾತ್ರವಲ್ಲ ಚಿರತೆಗಳೂ ಇವೆ. ನೀರಿಲ್ಲದೆ ಬೇಸತ್ತಿರುವ ಗ್ರಾಮಸ್ಥರಿಗೆ ಕಾಡುಪ್ರಾಣಿಗಳ ದಾಳಿಯಿಂದಾಗಿ ಈ ಗ್ರಾಮ ರಕ್ಷಣೆಯೇ ಇಲ್ಲದ ನತದೃಷ್ಟ ಹಳ್ಳಿಯಾಗಿ ಮಾರ್ಪಾಟಾಗಿಬಿಟ್ಟಿದೆ.

Comments are closed.