ಕರ್ನಾಟಕ

ಮೈಸೂರಿನಲ್ಲಿ ಕೆಲವು ಕಡೆ ಜೆಡಿಎಸ್​ನವರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ; ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಜೆಡಿಎಸ್​​ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಸಚಿವ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ. ಜಿಟಿಡಿ‌ ಹೇಳಿಕೆಯನ್ನು ಒಪ್ಪಿಕೊಂಡ ಅವರು, ಉದ್ಬೂರಿನಲ್ಲಿ ಜೆಡಿಎಸ್​​ನವರು ಬಿಜೆಪಿಗೆ ಮತ ಹಾಕಿದ್ದಾರೆ. ಉದ್ಬೂರಿನಲ್ಲಿ ಕಾಂಗ್ರೆಸ್ ಮತದಾರರೂ ಇದ್ದಾರೆ. ಕಾಂಗ್ರೆಸ್ ಮತದಾರರು ಕಾಂಗ್ರೆಸ್​ಗೆ ಹಾಕಿದ್ದಾರೆ. ಆದರೆ ಈ ಉದಾಹರಣೆ ಇಡೀ ಕ್ಷೇತ್ರಕ್ಕೆ ಅನ್ವಯಿಸಲ್ಲ. ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದು, ಎಲ್ಲರೂ ಬುದ್ದಿವಂತರಿದ್ದಾರೆ. 100% ನಾವು ಮೈಸೂರು ಕೊಡಗು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಕೆ.ಎಸ್​.ಈಶ್ವರಪ್ಪನವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಬಾಲಕಿ‌‌ ಮೇಲೆ ಅತ್ಯಾಚಾರವಾದಾಗ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ಅವನು ಹೇಳಿರುವಂತೆ ನಾನು ನಡೆದುಕೊಂಡಿರಲು ಸಾಧ್ಯವೇ ಇಲ್ಲ. ಅವನೇಕೆ ಪ್ರತಿಪಕ್ಷದಲ್ಲಿ ಸುಮ್ಮನೆ ಕುಳಿತಿದ್ದ. ಆ ವೇಳೆ ನನ್ನನ್ನು ಯಾಕೆ ಪ್ರಶ್ನೆ‌ ಮಾಡಲಿಲ್ಲ ಎಂದು ಈಶ್ವರಪ್ಪನವರಿಗೆ ಏಕವಚನದಲ್ಲೇ ತಪರಾಕಿ ಬಾರಿಸಿದ್ದಾರೆ. ಇದೇ ವೇಳೆ ಮಾಧ್ಯಮದವರ ಮೇಲು ಸಿಡಿಮಿಡಿಗೊಂಡ ಅವರು, ನೀವೇಕೆ ಮಾಡಲಿಲ್ಲ ಎಂದು ಆತನನ್ನು ಪ್ರಶ್ನೆ ಮಾಡಬೇಕಿತ್ತುಎಂದು ಸಿಡಿಮಿಡಿಗೊಂಡಿದ್ದಾರೆ.

ಭಷ್ಟಾಚಾರದ ಪಟ್ಟ ಕಟ್ಟಿಕೊಂಡು ರಾಜೀವ್ ಗಾಂಧಿ ನಿಧನವಾದರು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಮೋದಿ ಯಾವ ವಿಷಯದಲ್ಲಾದರೂ ಸತ್ಯ ಹೇಳಿದ್ದಾರಾ ಹೇಳಿ? ಅವರು ಯಾವುದರಲ್ಲೂ ಸತ್ಯ ಹೇಳಿಲ್ಲ. ಸುಳ್ಳನ್ನು ಮಾರ್ಕೆಟಿಂಗ್ ಮಾಡಿ ಕಳೆದ ಬಾರಿ ಪ್ರಧಾನಿಯಾದರು. ಆದರೆ ಈ ಬಾರಿ ಸುಳ್ಳನ್ನು ಹೇಳಿ ಪ್ರಧಾನಿಯಾಗಲು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ಸತ್ಯ ಎನ್ನುತ್ತಾರೆ. ಮೋದಿ ಗನ್ ಹಿಡಿದುಕೊಂಡು ಯುದ್ದ ಮಾಡಲು ಹೋಗಿದ್ರಾ? ಎಂದು ಪ್ರಧಾನಿ ಮೋದಿ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಗೆಲ್ಲಲಿದೆ. ಡಿನ್ನರ್ ಪಾರ್ಟಿಗೆ ಹೋದವರನ್ನು ಪ್ರಶ್ನಿಸಕ್ಕಾಗಲ್ಲ. ಊಟಕ್ಕೆ ಹೋದವರ ವಿಚಾರವನ್ನೆಲ್ಲ ಮಾತನಾಡಕ್ಕಾಗುತ್ತಾ? ನಾವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಎಷ್ಟು ಸಾವಿರ ಮತಗಳಿಂದ ಗೆಲ್ಲುತ್ತೇವೆ ಅಂತ ಶಾಸ್ತ್ರ ಹೇಳೋಕಾಗುತ್ತಾ? ಮೈಸೂರು ಕೊಡಗಿನಲ್ಲೂ ಗೆಲ್ಲುತ್ತೇವೆ. ಮಂಡ್ಯದಲ್ಲೂ ಗೆಲ್ಲುತ್ತೇವೆ ಎಂದರು.

Comments are closed.