ಕರ್ನಾಟಕ

ಇನ್ಷೂರೆನ್ಸ್ ದುಡ್ಡಿಗಾಗಿ ಈರುಳ್ಳಿ ಮಂಡಿ ಮಾಲೀಕರಿಂದ ಹಮಾಲಿ ಹತ್ಯೆ!

Pinterest LinkedIn Tumblr


ದಾವಣಗೆರೆ: ಈರುಳ್ಳಿ ಮಂಡಿ ಮಾಲೀಕ ಗುರಣ್ಣನ ಮಗನ ಸಾವು ಹಾಗೂ ಮಂಡಿಯ ಹಮಾಲಿ ವೀರೇಶ್​ನ ನಾಪತ್ತೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಗುರಣ್ಣನ ಮಗ ಸತ್ತಿಲ್ಲ. ಹಮಾಲಿಯನ್ನು ಕೊಲೆಗೈದು ಅಪಘಾತದಲ್ಲಿ ತಮ್ಮ ಮಗ ಸತ್ತನೆಂದು ಬಿಂಬಿಸಲು ದೊಡ್ಡ ನಾಟಕವಾಡಿರುವ ವಿಚಾರ ಬೆಳಕಿಗೆ ಬಂದಿದೆ. ರಾಣೆಬೆನ್ನೂರಿನ ಮೋಟೆಬೆನ್ನೂರು ಠಾಣೆ ಪೊಲೀಸರು ಮಂಡಿ ಮಾಲೀಕ ಗುರಣ್ಣನ ಇಬ್ಬರು ಮಕ್ಕಳಾದ ಮೃತ್ಯುಂಜನ ಮತ್ತು ಬಸವರಾಜ್ ಅವರನ್ನು ಬಂಧಿಸಿದ್ದಾರೆ. ಹಮಾಲಿಯನ್ನು ಕೊಲೆಗೈದ ವಿಚಾರ ಹೊರಬರುತ್ತಿದ್ದಂತೆಯೇ ಮಂಡಿಯ ಇತರ ಹಮಾಲಿಗಳು ಉಗ್ರಾವತಾರ ತಾಳಿ ಮಂಡಿಯನ್ನು ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಈರುಳ್ಳಿ ಮಾರುಕಟ್ಟೆಯಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ ದಾವಣಗೆರೆಯ ಬಸಾಪುರ ನಿವಾಸಿ ವೀರೇಶ್(35) ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಏಪ್ರಿಲ್ 25ರಂದು ಹಲಗೇರಿ ರಸ್ತೆಯಲ್ಲಿ ವಾಹನವೊಂದರ ಅಪಘಾತವಾಗಿತ್ತು. ಆ ದುರ್ಘಟನೆಯಲ್ಲಿ ಮೃತ್ಯುಂಜಯ ಸತ್ತಿದ್ದಾನೆಂಬ ಸುದ್ದಿ ಕೇಳಿಬಂದಿತ್ತು. ಇದೇ ವೇಳೆ, ತಮ್ಮ ವೀರೇಶ್ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ರಾಣೆಬೆನ್ನೂರು ಪೊಲೀಸರಿಗೆ ಕಾರು ಅಪಘಾತ ಪ್ರಕರಣದ ಬಗ್ಗೆ ಅನುಮಾನ ಬಂದಿದೆ. ತನಿಖೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ.

ಮೃತ್ಯುಂಜಯನಿಗೆ ಕೋಟಿಗಟ್ಟಲೆ ಸಾಲವಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ಷೂರೆನ್ಸ್ ಹಣ ಲಪಟಾಯಿಸಲು ಸಾವಿನ ನಾಟಕವಾಡಿದ್ದಾರೆಂಬ ಶಂಕೆ. ಮೃತ್ಯುಂಜಯ ಮತ್ತು ಬಸವರಾಜು ಹಾಗೂ ಇತರರು ಸೇರಿ ಹಮಾಲಿ ವೀರೇಶ್​ನನ್ನು ಕೊಂದು, ಆತನ ಮೃತ ದೇಹವನ್ನು ಕಾರಿಗೆ ಹಾಕಿ ಅಪಘಾತ ಮಾಡಿದ್ದಾರೆ. ಈ ಅಪಘಾತದಲ್ಲಿ ಮೃತ್ಯುಂಜಯ ಸತ್ತನೆಂದು ಸುದ್ದಿ ಹಬ್ಬಿಸಲಾಗುತ್ತದೆ. ಈಗ ಪೊಲೀಸರು ಸತ್ಯಾಂಶ ಬಯಲಿಗೆಳೆದಿದ್ದಾರೆ.

ವೀರೇಶ್​ನನ್ನು ಅಂಗಡಿ ಮಾಲೀಕರೇ ಕೊಲೆಗೈದಿರುವ ವಿಚಾರ ಬೆಳಕಿಗೆ ಬರುತ್ತಲೇ ಇತರೆ ಹಮಾಲಿಗಳು ಆಕ್ರೋಶಗೊಂಡಿದ್ದಾರ. ವೀರೇಶ್​ನ ಕುಟುಂಬದವರು ಅಂಗಡಿ ಮುಂದೆ ಧರಣಿ ನಡೆಸಿದ್ದಾರೆ. ಮಂಡಿಯ ಇತರ ಹಮಾಲಿಗಳು ಉದ್ರಿಕ್ತಗೊಂಡು ಕಟ್ಟಡದೊಳಗಿರುವ ಉಪಕರಣಗಳನ್ನ ಧ್ವಂಸ ಮಾಡಿದ್ದಾರೆ. ಕಿಟಕಿಯ ಗಾಜುಗಳನ್ನ ಒಡೆದು ಹಾಕಿದ್ದಾರೆ. ಹಮಾಲಿಗಳ ಸಂಘ ಕೂಡ ಕೈಜೋಡಿಸಿ ಟಯರ್​ಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದೆ.

Comments are closed.