ಕರ್ನಾಟಕ

ಕುಂದಗೋಳದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸಮಾವೇಶ; ಡಿಕೆಶಿ ಜತೆಗೆ ಕಾಂಗ್ರೆಸ್ ಗೆಲುವಿಗೆ ದುಡಿಯುತ್ತೇವೆ ಎಂದ ಜಾರಕಿಹೊಳಿ

Pinterest LinkedIn Tumblr


ಹುಬ್ಬಳ್ಳಿ: ವಿಧಾನಸಭಾ ಉಪಚುನಾವಣಾ ಪ್ರಚಾರದ ಭಾಗವಾಗಿ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸಮಾವೇಶ ಆಯೋಜಿಸಲಾಗಿತ್ತು. ಇಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು. ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿದ ಇವರು, ಬಿಜೆಪಿ ರೈತರ ಸಾಲಮನ್ನಾ ಮಾಡಿ ಎಂದರೇ ಮಾಡಿಲ್ಲ. ಸಾಲಮನ್ನಾ ಮಾಡಲಿಕ್ಕೆ ಆಗುವುದಿಲ್ಲ ಎಂದು ಹೇಳುವುದಕ್ಕೆ ಅದೇನು ನಿಮ್ಮಪ್ಪನ ದುಡ್ಡಾ ಎಂದು ಕಿಡಿಕಾರಿದರು.

ನಾನು ಕೂಡ ರೈತರ ಸಾಲಮನ್ನಾ ಮಾಡಿದ್ದೇನೆ. ನಾವೇನು ನಮ್ಮಪ್ಪನ ಮನೆ ದುಡ್ಡಿನಿಂದ ಸಾಲಮನ್ನಾ ಮಾಡಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದೇನೆ. ಹಾಗೆಯೇ ಬಿಜೆಪಿ ಕೂಡ ತೆರಿಗೆ ದುಡ್ಡಲ್ಲಿಯೇ ಸಾಲಮನ್ನಾ ಮಾಡಲು ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರೈತರ ಹೆಸರಿನಲ್ಲಿ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿದ್ದ ಮಿಸ್ಟರ್ ಯಡಿಯೂರಪ್ಪ ದೊಡ್ಡ ಡೋಂಗಿ ರಾಜಕಾರಣಿ. ರೈತರ ಸಾಲಮನ್ನಾ ಮಾಡಿ ಎಂದರೇ, ನಾವೇನು ನೋಟ್​​ ಪ್ರಿಂಟ್ ಮಾಡಲ್ಲ ಎಂದಿದ್ದ. ನಾನು ನಾಲ್ಕು ದಿ‌ನ ಕುಂದಗೋಳ ಕ್ಷೇತ್ರದಲ್ಲಿ ಇರುತ್ತೇನೆ. ಹಳ್ಳಿಹಳ್ಳಿಗೆ ಬರುತ್ತೇನೆ. ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸುವಂತೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಇದೇ ವೇಳೆ ಮಾತಾಡಿದ ಸಚಿವ ಸತೀಶ್​​ ಜಾರಕಿಹೊಳಿಯವರು, ಸಚಿವ ಡಿ.ಕೆ ಶಿವಕುಮಾರ್​​ ನೇತೃತ್ವದಲ್ಲಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ. ನಮಗೆ ಡಿಕೆಶಿ ಬಗ್ಗೆ ಅಸಮಾಧಾನ ಇದೇ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈಗಾಗಲೇ ಅವರು ಹಲವು‌ ಕಡೆ ಚುನಾವಣೆಗಳ ಉಸ್ತುವಾರಿಯಾಗಿದ್ದರು. ಅಲ್ಲಿ ಎಲ್ಲಾ ನಾವು ಅವರದ್ದೇ ನೇತ್ರತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಈಗಲೂ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಪ್ರಶ್ನೆಯೇ ಇಲ್ಲ. ಯಾರಿಗೇ ಹೆಚ್ಚು ಸಾಮರ್ಥ್ಯ ಮತ್ತು ಅನುಭವ ಇರುತ್ತದೆಯೇ ಅಂತವರಿಗೆ ಚುನಾವಣೆ ಉಸ್ತುವಾರಿ ನೀಡಲಾಗುತ್ತದೆ. ಉಸ್ತುವಾರಿ ಯಾರೇ ಆಗಿರಲಿ ನಾವು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಬೇಧಭಾವ ಇಲ್ಲ. ಬದಲಿಗೆ ಪ್ರೀತಿ-ವಿಶ್ವಾಸ ಇದೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು.

Comments are closed.