ಧಾರವಾಡ,: ಮಹಿಳೆಯರು ಅಶ್ಲೀಲ ಬಟ್ಟೆಗಳನ್ನು ಧರಿಸುವುದರಿಂದ ಅತ್ಯಾಚಾರಗಳು ನಡೆಯುತ್ತಿವೆ ಎಂದು ಕೂಡಲ ಸಂಗಮ ಪೀಠ ಬಸವಧರ್ಮದ ಸ್ವಾಮೀಜಿ ಬಸವ ಪ್ರಕಾಶ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಅಶ್ಲೀಲ ಬಟ್ಟೆಗಳನ್ನು ಹಾಕಬಾರದು, ಇದರಿಂದ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರಗಳು ನಡೆಯುತ್ತವೆ. ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಅಶ್ಲೀಲ ಬಟ್ಟೆಗಳನ್ನು ಹಾಕಿಕೊಂಡು ತಿರುಗಾಡಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಎಂದು ಟೀಕಿಸಿದ್ದಾರೆ.
ಹೆಣ್ಣು ಮಕ್ಕಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಪಾಲನೆ ಮಾಡಿಕೊಂಡು ಹೋಗಬೇಕು. ಉಡುಗೆ-ತೊಡುಗೆಯಲ್ಲಿ ನಮ್ಮ ದೇಶ ವಿಶಿಷ್ಟವಾಗಿದೆ. ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆಗಳನ್ನು ಹಾಕುವುದನ್ನು ಬಿಟ್ಟು, ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಪದೇ ಪದೇ ಅತ್ಯಾಚಾರಗಳು ನಡೆಯುತ್ತಲೇ ಇವೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ತೋರದೆ ಕಣ್ಮುಚ್ಚಿ ಕುಳಿತಿದೆ ಎಂದು ಭಾಸವಾಗುತ್ತಿದೆ. ನಮ್ಮ ಭಾರತ ಪಾಶ್ಚಾತ್ಯ ದೇಶಗಳಿಗೆ ಮಾದರಿಯ ನಾಡಾಗಿದೆ. ನಮ್ಮ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ರಾಯಚೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಆದ ಅತ್ಯಾಚಾರದ ಸುದ್ದಿ ಕೇಳಿ ಬೇಸರವಾಯಿತು. ಆರೋಪಿಗಳನ್ನು ಸಾರ್ವಜನಿಕವಾಗಿ ಬಂಧಿಸಿ ಗಲ್ಲಿಗೇರಿಸಬೇಕು. ಒಂದು ವೇಳೆ ರಾಜ್ಯ ಸರ್ಕಾರ ಆರೋಪಿಗಳನ್ನು ಗಲ್ಲಿಗೇರಿಸದಿದ್ದರೆ ನಾನು ಬೆಳಗಾವಿಯ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ತಲೆತಗ್ಗಿಸುವ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಬೇಸರಿಸಿದರು.
Comments are closed.