ಕರ್ನಾಟಕ

ಜೆಡಿಎಸ್​ ಕಾರ್ಯಕರ್ತರು ಬಿಜೆಪಿಗೆ ಮತ ಎಂಬ ಜಿಟಿ ದೇವೇಗೌಡ ಹೇಳಿಕೆ: ಮೌನ ಮುರಿದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಮೈತ್ರಿ ಧರ್ಮ ಪಾಲಿಸಿಲ್ಲ. ಕ್ಷೇತ್ರದ ಕೆಲವು ಕಡೆ ಜೆಡಿಎಸ್​ ಕಾರ್ಯಕರ್ತರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಸಂಚಲನ ಮೂಡಿಸುವ ಹೇಳಿಕೆ ನೀಡುವ ಮೂಲಕ ಸಚಿವ ಜಿಟಿ ದೇವೇಗೌಡ ಅಚ್ಚರಿ ಮೂಡಿಸಿದ್ದರು.

ಮೈಸೂರು ಮೈತ್ರಿ ಅಭ್ಯರ್ಥಿ ವಿಜಯಶಂಕರ್​ ಸಿದ್ದರಾಮಯ್ಯ ಆಪ್ತರಾಗಿದ್ದು, ಅಲ್ಲದೇ ಈ ಕ್ಷೇತ್ರವನ್ನು ಜೆಡಿಎಸ್​ ಆಪೇಕ್ಷೆ ಪಟ್ಟಿತು. ಆದರೆ, ಸಿದ್ದರಾಮಯ್ಯ ಪಟ್ಟು ಹಿಡಿದ ಹಿನ್ನೆಲೆ ಜೆಡಿಎಸ್​ ಈ ಕ್ಷೇತ್ರವನ್ನು ಬಿಟ್ಟು ಕೊಟ್ಟಿತು. ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವಾದ ಆರಂಭದಲ್ಲಿ 10 ದಿನಗಳ ಕಾಲ ನಾಪತ್ತೆಯಾಗಿದ್ದ ಜಿಟಿ ದೇವೇಗೌಡ ಕ್ಷೇತ್ರಕ್ಕೆ ಮರಳಿದ ಬಳಿಕ ಮಂಡ್ಯದಲ್ಲಿ ಸಹಕಾರ ನೀಡಿದರಷ್ಟೇ ಮೈಸೂರಿನಲ್ಲಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಅಭ್ಯರ್ಥಿಪರ ಪ್ರಚಾರದ ವೇಳೆಯೂ ಜೆಡಿಎಸ್​ ನಾಯಕರು ಹಲವು ಬಾರಿ ಗೈರಾಗುವ ಮೂಲಕ ಈ ಮೈತ್ರಿಗೆ ಅಸಮ್ಮತಿ ಸೂಚಿಸಿದ್ದು ಬಹಿರಂಗವಾಗಿತ್ತು. ಈಗ ಜಿಟಿಡಿ ಈ ರೀತಿ ಹೇಳಿಕೆ ಮೂಲಕ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂಬುದನ್ನು ನಾಯಕರೇ ಒಪ್ಪಿಕೊಂಡಿದ್ದರು.

ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಬದ್ದ ವೈರಿಗಳಾಗಿರುವ ಕಾಂಗ್ರೆಸ್​- ಜೆಡಿಎಸ್​ ಈ ಬಾರಿ ಹೊಂದಾಣಿಕೆ ಮೂಲಕ ಚುನಾವಣೆ ಎದುರಿಸಲು ಸಿದ್ದವಾಗಿದ್ದರೂ ಒಳಗೆ ಶೀತಲ ಸಮರ ನಡೆದಿತ್ತು ಎಂಬುದು ಚುನಾವಣೆ ಬಳಿಕವೂ ಬಹಿರಂಗವಾಗಿದೆ.

ಜಿಟಿ ದೇವೇಗೌಡ ಹೇಳಿಕೆ ಬಳಿಕ ಸಿದ್ದರಾಮಯ್ಯ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕುಂದಗೋಳ ಚುನಾವಣಾ ಪ್ರಚಾರದಿಂದ ರಾಜಧಾನಿಗೆ ವಾಪಸ್ಸಾಗಿದ್ದರೂ, ಬಹಿರಂಗವಾಗಿ ಕಾಣಿಸಿಕೊಳ್ಳದ ಸಿದ್ದರಾಮಯ್ಯಗೆ ಈ ವಿಷಯಗಳು ಆಘಾತ ಮೂಡಿಸದೆ ಇರಲಾರದು. ಈ ಕುರಿತು ಮೊದಲ ಬಾರಿ ಮೌನ ಮುರಿದಿರುವ ಸಿದ್ದರಾಮಯ್ಯ, ಜಿಟಿಡಿ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್​ನಲ್ಲಿ ಅಸಮಾಧಾನದ ಜೊತೆಗೆ ಆತಂಕ ವ್ಯಕ್ತಪಡಿಸಿರುವ ಅವರು, ಅವರ ಮಾತುಗಳು ಸುಳ್ಳಾಗಲಿ ಎಂದು ಆಶಿಸಿದ್ದಾರೆ. ಅಲ್ಲದೇ ಅವರು ಮೈತ್ರಿ ಧರ್ಮ ಪಾಲನೆ ಮಾಡಿದ್ದಾರಾ ಇಲ್ಲವಾ ಎಂಬುದು ಫಲಿತಾಂಶದ ದಿನ ಬಹಿರಂಗಗೊಳ್ಳಲಿದೆ . ಈಗ ಸಮಯ ಮೀರಿ ಹೋಗಿದ್ದ ಈ ಬಗ್ಗೆ ಚಿಂತಿಸಿ ಫಲವಿಲ್ಲ ಎಂದು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Comments are closed.