ಹಾಸನ: ಕಳೆದ ಎಲ್ಲ ವರ್ಷದ ದಾಖಲೆಗಳನ್ನೂ ಧೂಳೀಪಟ ಮಾಡಿ ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಕಾರಣವೇನು? ಎಂಬ ಬಗ್ಗೆ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಅದೇನೇ ಇರಲಿ, ಇದೀಗ ಖುದ್ದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣನವರೇ ತಮ್ಮ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಹಾಸನ ಮೊದಲ ಸ್ಥಾನ ಬಂದಿರುವುದಕ್ಕೆ ಸಚಿವ ರೇವಣ್ಣ ಸಂಪೂರ್ಣ ಕ್ರೆಡಿಟ್ ಅನ್ನು ತಮ್ಮ ಪತ್ನಿ ಭವಾನಿ ರೇವಣ್ಣನವರಿಗೆ ನೀಡಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಹಾಸನ ಫಸ್ಟ್ ಬರಲು ನನ್ನ ಹೆಂಡತಿ ಭವಾನಿ ಕೂಡ ಕಾರಣ. ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಸಿಎಂ, ರಾಜ್ಯ ಕಾರ್ಯದರ್ಶಿ, ನಾನು ಸಭೆ ನಡೆಸಿದ್ದೇವೆ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು, ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ನಾನು ಮಂತ್ರಿಯಾದ ಬಳಿಕ ಎಲ್ಲಾ ಮುಖ್ಯೋಪಾಧ್ಯಾಯರನ್ನ ಕರೆಸಿ 2 ಬಾರಿ ಸಭೆ ನಡೆಸಿದ್ದೆ. ಬೆಳಗ್ಗೆ, ಸಂಜೆ ವಿಶೇಷ ತರಬೇತಿ ನಡೆಸಲು ಸೂಚಿಸಿದ್ದೆ ಎಂದು ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.
ಕೆಲವು ಶಾಲೆಗಳಲ್ಲಿ ಭಾನುವಾರವೂ ಶಿಕ್ಷಕರು ತರಗತಿ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಕರೆಸಿ ಉತ್ತಮ ಫಲಿತಾಂಶ ಬಂದ ಶಾಲಾ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ. ಈ ಬಾರಿ ಎಲ್ ಕೆಜಿಯಿಂದ ಪಿಯುಸಿವರೆಗೆ 2,000 ಇಂಗ್ಲೀಷ್ ಶಾಲೆ ತೆರೆಯಲೇಬೇಕು ಎಂದು ನಾನು ಸಿಎಂಗೆ ಮನವಿ ಮಾಡುತ್ತೇನೆ. ಬೇರೆ ಅನುದಾನ ಕಡಿತಗೊಳಿಸಿ ಎಲ್ಲಾ 224 ಕ್ಷೇತ್ರಗಳಿಗೆ ಪ್ರತೀ ಕ್ಷೇತ್ರಕ್ಕೆ 10 ಇಂಗ್ಲೀಷ್ ಶಾಲೆ ತೆರೆಯುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ದೈವಾನುಗ್ರಹವೇ ಫಲಿತಾಂಶಕ್ಕೆ ಕಾರಣ!:
ರಾಜ್ಯದಲ್ಲಿ ಹಾಸನ ಪ್ರಥಮ ಸ್ಥಾನ ಬರಲು ದೇವರ ಅನುಗ್ರಹವೇ ಕಾರಣ. ದೈವಾನುಗ್ರಹದಿಂದ ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದೆ. ಅವಳೇನು ಕಡಿದು ಕಟ್ಟೆ ಹಾಕಿದ್ದಾಳೇನ್ರೀ? ಎಂದು ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ದ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.